ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಮತ್ತೊಂದು ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’, ಅಣ್ಣಾ ಬಂದ್ರೆ ಜೋಶ್ ಬತ್ತದೆ ಹಾಗೂ ಹುಡ್ಗೀರ್ ಡೇಂಜರಸ್ ಎಂಬ ಹಾಡುಗಳಿಗೆ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರತಂಡ, ಇದೀಗ ‘ಮಿಲ್ಕಿ ಬ್ಯೂಟಿ’ ಎಂಬ ಹಾಡನ್ನು ರಿಲೀಸ್ ಮಾಡಿದೆ. ಮಹೇಶ್ ಕುಮಾರ್ ನಿರ್ದೇಶನವಿರುವ ಈ ಚಿತ್ರ ಆಗಸ್ಟ್ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಇಂದು ನಾಗರಾಜ್, ನಿಶಾನ್ ರೈ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಮಾರು ವರ್ಷಗಳ ನಂತರ ನಟಿ ಪ್ರಜ್ಞಾ ಈ ಸಿನಿಮಾ ಮೂಲಕ ವಾಪಸ್ ಬಂದಿದ್ದಾರೆ. ಈ ಸಿನಿಮಾವನ್ನು ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿದ್ದಾರೆ.
‘ಅಯೋಗ್ಯ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಗೆಲ್ಲುವುದಕ್ಕೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾವು ಚಿರಋಣಿ. ನಿರ್ದೇಶಕ ಮಹೇಶ್ ಕುಮಾರ್ ಮಂಡ್ಯದ ಒಂದು ಹಳ್ಳಿಯ ಕಥೆಯಲ್ಲಿ ಜನರನ್ನು ರಂಜಿಸುವಂತಹ ಕಥೆ ಹೇಳಿದ್ದರು. ಆಯೋಗ್ಯ-2 ಸಿನಿಮಾದ ಕಂಟೆಂಟ್ ಕೂಡ ಒಂದು ಹಳ್ಳಿಯ ಕಥೆಯಾಗಿರದೇ ರಾಜ್ಯದ ಪ್ರತಿಹಳ್ಳಿಗೂ ತಲುಪುವಂತಹ ಸಬ್ಜೆಕ್ಟ್’ ಎನ್ನುತ್ತಾರೆ ನೀನಾಸಂ ಸತೀಶ್.
ಆಯೋಗ್ಯ ಹಾಗೂ ಆಯೋಗ್ಯ 2 ಈ ಎರಡು ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟು, ಕಥೆಯನ್ನು ಎಂಜಾಯ್ ಮಾಡುತ್ತ ಅಭಿನಯಿಸಿದ ಸಿನಿಮಾ. ಆಯೋಗ್ಯ 2 ಸಿನಿಮಾವನ್ನು ನಮ್ಮ ವಿಐಪಿಗಳೊಂದಿಗೆ (ಪ್ರೇಕ್ಷಕರು) ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಲು ಕಾಯುತ್ತಿದ್ದೇನೆ, ದಯವಿಟ್ಟು ಬಂದು ಸಿನಿಮಾ ನೋಡಿ. ಕನ್ನಡ ಸಿನಿಮಾಗಳಿಗೆ ‘ದಯವಿಟ್ಟು ನೋಡಿ’ ಎಂದು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ಈ ಸಿನಿಮಾ ನೋಡಿ ಎಲ್ಲರೂ ಮೆಚ್ಚಿಕೊಳ್ತೀರ ಎಂಬ ಭರವಸೆ ಇದೆ ಎಂದರು ರಚಿತಾರಾಮ್.
ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ‘ಶಾಖಾಹಾರಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಶ್ವಜಿತ್ ರಾವ್ ಈ ಚಿತ್ರದ ಕ್ಯಾಮೆರಾಮನ್. ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.






















