SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ: ದಾವಣಗೆರೆಯ 19 ಕೇಂದ್ರಗಳಲ್ಲಿ 11ಸಾವಿರ ಅಭ್ಯರ್ಥಿಗಳಿಗೆ ಪರೀಕ್ಷೆ

ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ: ದಾವಣಗೆರೆಯ 19 ಕೇಂದ್ರಗಳಲ್ಲಿ 11ಸಾವಿರ ಅಭ್ಯರ್ಥಿಗಳಿಗೆ ಪರೀಕ್ಷೆ

0
23


ದಾವಣಗೆರೆ: ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಲಿಖಿತ ಪರೀಕ್ಷೆ ಭಾನುವಾರ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಆರಂಭಗೊಂಡಿತು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 11,033 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ನೀಟ್ ಪರೀಕ್ಷೆ ಅಕ್ರಮ ಪ್ರಕರಣದ ಹಿನ್ನೆಲೆ ಈ ಬಾರಿ ಪರೀಕ್ಷಾ ಪ್ರಕ್ರಿಯೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಬೆಳಗ್ಗೆಯಿಂದಲೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಪಾಸಣೆ ನಡೆಸಿದ ಬಳಿಕವೇ ಕೇಂದ್ರಗಳೊಳಗೆ ಪ್ರವೇಶಕ್ಕೆ ಅವಕಾಶ ನೀಡಿದರು.

ಪರೀಕ್ಷೆಯನ್ನು ಪಾರದರ್ಶಕ ಹಾಗೂ ಶಿಸ್ತುಬದ್ಧವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರೀಕ್ಷಾ ವೀಕ್ಷಕರು, ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರೀಕ್ಷಾ ಪ್ರಕ್ರಿಯೆಯ ಮೇಲೆ ನಿಗಾ ವಹಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ ಅಳವಡಿಸಲಾಗಿದ್ದು, ಅಭ್ಯರ್ಥಿಗಳ ಗುರುತು ಪರಿಶೀಲನೆ ಕಟ್ಟುನಿಟ್ಟಾಗಿ ನಡೆಯಿತು. ಸಿಸಿಟಿವಿ ಕ್ಯಾಮೆರಾಗಳು ಹಾಗೂ ಇತರ ತಾಂತ್ರಿಕ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು.

ಯಾವುದೇ ರೀತಿಯ ಎಲೆಕ್ಟ್ರಾನಿಕ್ ಅಥವಾ ನಿಷೇಧಿತ ಸಾಧನಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗದಂತೆ ವಿಶೇಷ ನಿಗಾ ವಹಿಸಲಾಗಿದೆ.

ಅಭ್ಯರ್ಥಿಗಳಿಗೆ ಶಿವಧಾರ, ಜನಿವಾರ, ಉಡುದಾರ, ಮಾಂಗಲ್ಯ, ಮೂಗುತಿ ಹಾಗೂ ವಿಭೂತಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಇತರೆ ವಸ್ತುಗಳನ್ನು ನಿಷೇಧಿಸಲಾಗಿದೆ.

ಪರೀಕ್ಷೆಯ ಹಿನ್ನೆಲೆಯಲ್ಲಿ ನಗರದ 19 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸಮೀಪದ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಕಡ್ಡಾಯವಾಗಿ ಮುಚ್ಚಿಸಲಾಗಿದೆ.

ಯಾವುದೇ ರೀತಿಯ ಅಕ್ರಮ ನಡೆಯದಂತೆ ತಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಎಚ್.ಟಿ. ತಿಳಿಸಿದ್ದಾರೆ. ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯನ್ನು ಪರಿಶೀಲಿಸಿದರು.