ದಾವಣಗೆರೆ: ರಾಜ್ಯ ಸರ್ಕಾರ ಮೊದಲು ಬರಪೀಡಿತ ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಿ, ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅದರ ನಂತರವೇ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡದಿದ್ದರೆ ಕೇಂದ್ರದ ತಂಡ ಹೇಗೆ ಬರುತ್ತದೆ? ನಿಯಮಾನುಸಾರ ಮೊದಲು ರಾಜ್ಯ ಸರ್ಕಾರ ಬರ ಘೋಷಣೆ ಮಾಡಿ ವರದಿ ಸಲ್ಲಿಸಬೇಕು. ಅದನ್ನು ಬಿಟ್ಟು ಕೇಂದ್ರದ ತಂಡ ಕಳುಹಿಸಿ ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ನಿಮ್ಮ ಜವಾಬ್ದಾರಿಯನ್ನು ಮೊದಲು ನೀವು ನಿರ್ವಹಿಸಿ, ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸರ್ಕಾರದ ಬಳಿ ಹಣವೇ ಇಲ್ಲದ ಕಾರಣ ಕೇಂದ್ರದ ನೆರವಿಗಾಗಿ ಕಾಯುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಎಷ್ಟು ಹಣ ಇದೆ ಎಂಬುದರ ಕುರಿತು ಶ್ವೇತಪತ್ರ (ವೈಟ್ ಪೇಪರ್) ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ಎಷ್ಟು ಹಣ ಬಾಕಿಯಿದೆ, ಪಿಂಚಣಿಗೆ ಎಷ್ಟು ಹಣ ನೀಡಬೇಕಿದೆ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಿಗೆ ಎಷ್ಟು ಬಾಕಿ ಇದೆ ಎಂಬುದನ್ನು ಸರ್ಕಾರ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಸರ್ಕಾರ ಪಾರದರ್ಶಕತೆ ತೋರಬೇಕು ಹಾಗೂ ರೈತರ ಸಂಕಷ್ಟ ನಿವಾರಣೆಗೆ ತಕ್ಷಣ ಬರ ಘೋಷಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.




















