SK Home Ad
Home ನಮ್ಮ ಜಿಲ್ಲೆ ದಾವಣಗೆರೆ ರೈತರೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಆರ್. ಅಶೋಕ್ ವಾಗ್ದಾಳಿ

ರೈತರೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಆರ್. ಅಶೋಕ್ ವಾಗ್ದಾಳಿ

0
23
File Photo

ದಾವಣಗೆರೆ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಇನ್ನೂ ಅಧಿಕೃತವಾಗಿ ಬರಗಾಲ ಘೋಷಣೆ ಮಾಡದೇ ರೈತರೊಂದಿಗೆ ಚೆಲ್ಲಾಟ ನಡೆಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಬುಧವಾರ ಬರ ಪರಿಸ್ಥಿತಿ ವೀಕ್ಷಿಸಿದ ಬಳಿಕ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬರ ಅಧ್ಯಯನ ತಂಡದೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ರಾಜ್ಯದ ಜನರು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದರೂ ಸರ್ಕಾರ ಇನ್ನೂ ಬರಗಾಲ ಘೋಷಿಸಿಲ್ಲ. ಬರ ಘೋಷಿಸಿದರೆ ಕೇಂದ್ರ ಸರ್ಕಾರದ ನೆರವು ಹಾಗೂ ವಿಮಾ ಕಂಪನಿಗಳಿಂದ ರೈತರಿಗೆ ಪರಿಹಾರ ದೊರೆಯುತ್ತದೆ. ಆದರೆ ಸರ್ಕಾರ ಹಣ ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಬರ ಘೋಷಣೆಗೆ ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಈಗಾಗಲೇ ವ್ಯಾಪಕ ಬರ ಆವರಿಸಿದ್ದು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕೇವಲ ಶೇ. 19ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ ಸೂರ್ಯಕಾಂತಿ ಬೆಳೆ ಹೂ ಬಿಡದೆ ಒಣಗಿದ್ದು, ಅಡಿಕೆ ತೋಟಗಳೂ ಹಾನಿಗೀಡಾಗಿವೆ. ಇಂತಹ ಸಂದರ್ಭದಲ್ಲಿ ಒಂದು ಅಡಿಕೆ ಮರಕ್ಕೆ ಕೇವಲ 16 ರೂ. ಪರಿಹಾರ ನಿಗದಿಪಡಿಸಿರುವುದು ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಖಜಾನೆ ಖಾಲಿಯಾಗಿದೆ. ಜೊತೆಗೆ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳೂ ಖಾಲಿಯಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದ ಬಳಿಕ ಪೂಜೆ, ವಿಭೂತಿ, ನಾಮ ಇವೆಲ್ಲ ನಡೆದರೂ ಬರಗಾಲ ಮಾತ್ರ ಮುಂದುವರಿದಿದೆ ಎಂದು ವ್ಯಂಗ್ಯವಾಡಿದರು.

ಬರಗಾಲವನ್ನು ಅಧಿಕೃತವಾಗಿ ಘೋಷಿಸದೇ ಕೇಂದ್ರ ಸರ್ಕಾರಕ್ಕೆ 10 ಸಾವಿರ ಕೋಟಿ ನೆರವು ಕೇಳುತ್ತಿರುವುದಕ್ಕೆ ಯಾವ ಆಧಾರವಿದೆ ಎಂದು ಪ್ರಶ್ನಿಸಿದ ಅವರು, ಮೊದಲು ರಾಜ್ಯ ಸರ್ಕಾರ ಬರಗಾಲ ಘೋಷಿಸಿ ಬಳಿಕ ನಿಯಮಾನುಸಾರ ಕೇಂದ್ರದ ನೆರವು ಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ವರ್ಷಗಳಲ್ಲಿ ಸುಮಾರು 2,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದೆ. ಆದರೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ವರದಿ ಹಾಗೂ ನಿಯಮಾನುಸಾರವೇ ನೆರವು ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.

ಗ್ಯಾರಂಟಿ ಸಮಿತಿಗಳು ಹಾಗೂ ʻಭಾರತ್ ಜೋಡೋ ಕ್ಲಬ್ʼಗಳಿಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರಿ ಸೌಲಭ್ಯ, ಬಂಗಲೆ ಮತ್ತು ಸಂಬಳ ನೀಡಲಾಗುತ್ತಿದೆ. ಆದರೆ ರೈತರಿಗೆ ಅಗತ್ಯ ನೆರವು ನೀಡಲು ಸರ್ಕಾರದ ಬಳಿ ಹಣವಿಲ್ಲ ಎನ್ನುವುದು ದೊಡ್ಡ ದುರಂತ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಿಸಿ 10 ಸಾವಿರ ಕೋಟಿ ಹಣ ಬಿಡುಗಡೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.