SK Home Ad
Home ವಿಶೇಷ ಸುದ್ದಿ ದೈವಾನುಗ್ರಹದಷ್ಟೇ ಮುಖ್ಯ ಗುರುವಿನ ಅನುಗ್ರಹ

ದೈವಾನುಗ್ರಹದಷ್ಟೇ ಮುಖ್ಯ ಗುರುವಿನ ಅನುಗ್ರಹ

0
13

ಇಂದು ಗುರು ಪೂರ್ಣಮೆ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸಮಾನ ಸ್ಥಾನವಿದೆ. ಜ್ಞಾನವನ್ನು ನೀಡಿ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಬದುಕಿಗೆ ಬೆಳಕಿನ ದಾರಿ ತೋರಿಸುವ ಮಹಾನ್ ವ್ಯಕ್ತಿಯೇ ಗುರು.

ಯೋಗ ಪರಂಪರೆಯ ಪ್ರಕಾರ, ಆದಿಯೋಗಿ ಶಿವನು ಸಪ್ತರ್ಷಿಗಳಿಗೆ ಯೋಗಜ್ಞಾನವನ್ನು ಬೋಧಿಸಿದ ದಿನವೂ ಇದೇ ಎನ್ನಲಾಗುತ್ತದೆ. ಬೌದ್ಧ ಪರಂಪರೆಯಲ್ಲಿ, ಗೌತಮ ಬುದ್ಧನು ಸಾರನಾಥದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ದಿನವೂ ಗುರುಪೂರ್ಣಿಮೆಯೇ. ಆದ್ದರಿಂದ ಗುರುಪೂರ್ಣಿಮೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಮಹತ್ವವನ್ನು ಹೊಂದಿದೆ.

ಸಾಧಕರು ಮತ್ತು ಶಿಷ್ಯರು ಯಾವ ದಿನಕ್ಕಾಗಿ ಅತ್ಯಂತ ಉತ್ಸುಕತೆಯಿಂದ (ಆತುರದಿಂದ) ಕಾಯುತ್ತಿರುತ್ತಾರೋ, ಅದೇ ಈ ಗುರು ಪೂರ್ಣಿಮೆಯ ಮಂಗಳಮಯ ದಿನ! ಶಿಷ್ಯನ ಸಂಪೂರ್ಣ ಜೀವನದಲ್ಲಿ ನೆಲೆಸಿರುವ ಸರ್ವಶಕ್ತ ಮತ್ತು ಸರ್ವಜ್ಞ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು, ಹಾಗೂ ಸಾಧನೆಯ ಮುಂದಿನ ಗುರಿಯನ್ನು ತಲುಪಲು ಸಂಕಲ್ಪ ಕೈಗೊಳ್ಳಲು ಸಾಧಕ ಮತ್ತು ಶಿಷ್ಯನ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ದಿನವಾಗಿದೆ. ಗುರುಗಳ ಕೃಪೆಯಿಂದ ಶಿಷ್ಯನಿಗೆ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಗುರು ಪೂರ್ಣಿಮೆಯ ಶುಭ ದಿನದಂದು ಗುರು ತತ್ತ್ವವು ಸಾಮಾನ್ಯ ದಿನಗಳಿಗಿಂತ 1 ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ಗುರುಗಳ ಗಮನವು ಶಿಷ್ಯನ ಲೌಕಿಕ ಸುಖದ ಮೇಲಿರುವುದಿಲ್ಲ, ಬದಲಿಗೆ ಕೇವಲ ಅವನ ಆಧ್ಯಾತ್ಮಿಕ ಉನ್ನತಿಯ ಮೇಲಿರುತ್ತದೆ. ಗುರುಗಳೇ ಶಿಷ್ಯನಿಗೆ ಸಾಧನೆ ಮಾಡಲು ಪ್ರೇರಣೆ ನೀಡುತ್ತಾರೆ, ಹಂತ-ಹಂತವಾಗಿ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ, ಸಾಧನೆಯಲ್ಲಿ ಬರುವ ಅಡೆತಡೆಗಳನ್ನು ದೂರ ಮಾಡುತ್ತಾರೆ, ಸಾಧನೆಯಲ್ಲಿ ಸ್ಥಿರವಾಗಿಡುತ್ತಾರೆ ಮತ್ತು ಅವನನ್ನು ಪರಿಪೂರ್ಣತೆಯ ಕಡೆಗೆ ಮುನ್ನಡೆಸುತ್ತಾರೆ.

‘ಗು’ ಎಂದರೆ ಅಂಧಕಾರ ಅಥವಾ ಅಜ್ಞಾನ ಮತ್ತು ‘ರು’ ಎಂದರೆ ತೇಜಸ್ಸು, ಪ್ರಕಾಶ ಅಥವಾ ಜ್ಞಾನ. ಅಜ್ಞಾನರೂಪಿ ಅಂಧಕಾರವನ್ನು ನಾಶಪಡಿಸುವ ಬ್ರಹ್ಮನೇ ಗುರು, ಇದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಸಾಧಕನ ಜೀವನದಲ್ಲಿ ಗುರುವಿನ ಮಹತ್ವವು ಅನನ್ಯಸಾಧಾರಣವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಗುರುಪ್ರಾಪ್ತಿಯೇ ಸಾಧಕನ ಮೊದಲ ಗುರಿಯಾಗಿರುತ್ತದೆ. ಶಿಷ್ಯನನ್ನು ಜೀವನಮುಕ್ತಗೊಳಿಸುವ ಗುರುಗಳ ಬಗ್ಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿಯೇ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

ಗುರು ಎಂದರೆ ಈಶ್ವರನ ಸಗುಣ ರೂಪ! ವರ್ಷವಿಡೀ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಚರಣಗಳಲ್ಲಿ ಅನನ್ಯ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವುದೇ ಗುರು ಪೂರ್ಣಿಮೆಯನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.

ಗುರು ಪೂರ್ಣಿಮೆಯ ಸಂದರ್ಭದಲ್ಲಿ ಮಾಡುವ ಸೇವೆ ಮತ್ತು ತ್ಯಾಗದ ಲಾಭವು ಇತರ ದಿನಗಳಿಗಿಂತ 1 ಸಾವಿರ ಪಟ್ಟು ಹೆಚ್ಚು ಸಿಗುತ್ತದೆ; ಇದೇ ಕಾರಣಕ್ಕಾಗಿ ಗುರು ಪೂರ್ಣಿಮೆಯು ಗುರುಕೃಪೆಯ ಒಂದು ಅಮೂಲ್ಯವಾದ ಪರ್ವಕಾಲವಾಗಿದೆ.

ಪೂಜೆಯ ವಿಧಿ ವಿಧಾನಗಳು: ಗುರು ಪೂಜೆಗಾಗಿ ಮಣೆಯನ್ನು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಮೊದಲು ಶ್ರೀ ಮಹಾಗಣಪತಿಯನ್ನು ಆಹ್ವಾನಿಸಿ ಸಂಕಲ್ಪ ಮಾಡಬೇಕು. ಆ ಬಳಿಕ ಶ್ರೀ ಮಹಾಗಣಪತಿಯನ್ನು ಪೂಜಿಸಿ ವಿಷ್ಣು ಸ್ಮರಣೆ ಮಾಡಬೇಕು. ನಂತರ ಮಹರ್ಷಿ ವೇದವ್ಯಾಸರನ್ನು ಪೂಜಿಸಬೇಕು. ಆ ಬಳಿಕ ಆದಿ ಶಂಕರಾಚಾರ್ಯರು ಮುಂತಾದವರನ್ನು ಸ್ಮರಿಸಿ, ತಮ್ಮ ಸಂಪ್ರದಾಯದ ಪರಂಪರೆಯ ಪ್ರಕಾರ ತಮ್ಮ ಗುರುಗಳ ಗುರುಗಳನ್ನು ಪೂಜಿಸಬೇಕು. ಈ ಸಮಯದಲ್ಲಿ ಗುರುಗಳ ಭಾವಚಿತ್ರ ಅಥವಾ ಪಾದುಕೆಗಳನ್ನು ಸಹ ಪೂಜಿಸಲಾಗುತ್ತದೆ. ಇದರ ನಂತರ ತಮ್ಮ ಸ್ವಂತ ಗುರುಗಳನ್ನು ಪೂಜಿಸಬೇಕು.

ಗುರು-ಶಿಷ್ಯ ಪರಂಪರೆಯ ಆದರ್ಶ: ಯಾವಾಗಲೆಲ್ಲಾ ಧರ್ಮಕ್ಕೆ ಹಾನಿಯಾಗಿದೆಯೋ, ಆಗೆಲ್ಲಾ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಗುರು-ಶಿಷ್ಯ ಪರಂಪರೆಯೇ ಮಾಡಿದೆ. ಈ ದೈವೀ ಪರಂಪರೆಯು ಕೇವಲ ಗುರು ಮತ್ತು ಶಿಷ್ಯ, ಅಧ್ಯಾತ್ಮ ಹಾಗೂ ಮೋಕ್ಷಕ್ಕಷ್ಟೇ ಸೀಮಿತವಾಗಿರದೆ, ವಿಶ್ವ ಕಲ್ಯಾಣಕ್ಕಾಗಿ ನಿರಂತರವಾಗಿ ಹರಿಯುತ್ತಿದೆ. ಗುರು-ಶಿಷ್ಯ ಪರಂಪರೆಯು ಕೇವಲ ಶಿಷ್ಯನ ಜೀವನದ ಕಲ್ಯಾಣವನ್ನು ಮಾತ್ರ ಮಾಡಿಲ್ಲ, ಬದಲಿಗೆ ಧರ್ಮದ ಸಂಸ್ಥಾಪನೆ ಮತ್ತು ರಾಷ್ಟ್ರದ ರಕ್ಷಣೆಯ ಕಾರ್ಯವನ್ನೂ ಮಾಡಿದೆ. ಇಂದಿಗೂ ಪರಮ ಕಲ್ಯಾಣಕಾರಿಯಾದ ಗುರು ತತ್ವವು ಸನಾತನ ಧರ್ಮದ ರಕ್ಷಣೆಗಾಗಿ, ಹಾಗೂ ಭಾರತದ ಉತ್ಕರ್ಷಕ್ಕಾಗಿ (ಉನ್ನತಿಗಾಗಿ) ಕಾರ್ಯನಿರ್ವಹಿಸುತ್ತಿದೆ. ಕೇವಲ ಕುಟುಂಬಕ್ಕಷ್ಟೇ ಸೀಮಿತವಾದ ಆಲೋಚನೆಯನ್ನು ಹೊಂದಿರದೆ, ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ! ಇಂದು ನಮ್ಮ ಹಿತವು ನಮ್ಮನ್ನು ನಾವು ಗುರು-ಶಿಷ್ಯ ಪರಂಪರೆಯ ಈ ಪ್ರವಾಹದಲ್ಲಿ ತೊಡಗಿಸಿಕೊಳ್ಳುವುದರಲ್ಲೇ ಅಡಗಿದೆ.