ಕೊಪ್ಪಳ: ಬಿಜೆಪಿ ಬರ ಅಧ್ಯಯನದ ಅಂಗವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದಲ್ಲಿ ಮುಖಂಡರು ಕುಷ್ಟಗಿ ತಾಲೂಕಿನ ತಾವರಗೇರಾ ಹಾಗೂ ಕನಕಗಿರಿಯ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾವರಗೇರಾ ಪಟ್ಟಣದ ರೈತ ನಿಂಗಪ್ಪ ಬಡಿಗೇರ ಅವರ ಜಮೀನಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಒಣಗಿ ನಿಂತಿದ್ದ ತೊಗರಿ ಬೆಳೆಯನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಸಿ.ಟಿ.ರವಿ, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಮಳೆಯ ಅಭಾವದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆಗೆ ಮಾಡಿದ ಹೂಡಿಕೆ ಸಂಪೂರ್ಣ ನಷ್ಟವಾಗಿದೆ. ಇದರಿಂದ ರೈತ ಕುಟುಂಬಗಳ ಜೀವನೋಪಾಯಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
ಸರ್ಕಾರದ ಸ್ಪಂದನೆ ತೀರಾ ನಿರಾಶಾದಾಯಕವಾಗಿದೆ. ಮಳೆ ಕೊರತೆಯಿಂದ ಹಾನಿಗೊಳಗಾದ ತಾಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ಹಾನಿಯ ವೈಜ್ಞಾನಿಕ ಸಮೀಕ್ಷೆ ನಡೆಸಿ ಯಾವುದೇ ವಿಳಂಬವಿಲ್ಲದೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸಬೇಕು. ಕೇಂದ್ರ ಸರ್ಕಾರದ ವಿ.ಬಿ.ಜಿ. ರಾಮ್‌ಜಿ ಯೋಜನೆಯಡಿ ಅರ್ಹರು ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು..
ಬಳಿಕ ವಿವಿಧ ಭಾಗಗಳಿಗೆ ತೆರಳಿ ತೊಗರಿ ಬೆಳೆಯ ಹಾನಿಯನ್ನು ವೀಕ್ಷಿಸಿದ ಸಿ.ಟಿ. ರವಿ, ರೈತರು ಹಾಗೂ ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿದರು. ಈ ವೇಳೆ ರೈತರು ಬೆಳೆ ನಷ್ಟ, ಸಾಲದ ಹೊರೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಉದ್ಯೋಗದ ಕೊರತೆ ಕುರಿತು ತಮ್ಮ ಅಳಲು ತೋಡಿಕೊಂಡರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಬಸವರಾಜ ದಡೇಸೂಗೂರು, ಮಾನಪ್ಪ ವಜ್ಜ, ತಿಪ್ಪೇರುದ್ರಸ್ವಾಮಿ, ಮನೋಹರಗೌಡ ಹೇರೂರು, ಗುರನಗೌಡ ಪಾಟೀಲ ಮತ್ತಿತರರು ಇದ್ದರು.






















