ಕೊಪ್ಪಳ: ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಶನಿವಾರ ಆರಂಭಗೊಂಡ 14ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಹಾಗೂ ಅವರ ಪತ್ನಿಯವರಿಗೆ ಸಾಂಪ್ರದಾಯಿಕ ತೆರೆದ ಸಾರೋಟ್ ಮತ್ತು ಎತ್ತಿನ ಬಂಡಿಯಲ್ಲಿ ಅದ್ಧೂರಿ ಮೆರವಣಿಗೆ ನಡೆಸುವ ಮೂಲಕ ಆತ್ಮೀಯ ಸ್ವಾಗತ ಕೋರಲಾಯಿತು.
ಗ್ರಾಮೀಣ ಸಂಸ್ಕೃತಿ, ಕನ್ನಡಾಭಿಮಾನ ಹಾಗೂ ಜಾನಪದ ವೈಭವದ ಸಮ್ಮಿಳನವಾಗಿದ್ದ ಈ ಮೆರವಣಿಗೆ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದೊಡ್ಡಯ್ಯ ಗದಡಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು.
ಸಾಂಪ್ರದಾಯಿಕವಾಗಿ ಅಲಂಕರಿಸಲಾದ ಎತ್ತಿನ ಬಂಡಿಯಲ್ಲಿ ಸಮ್ಮೇಳನಾಧ್ಯಕ್ಷರು ಆಸೀನರಾಗಿದ್ದರೆ, ಮುಂಭಾಗದಲ್ಲಿ ಡೊಳ್ಳು-ಕುಣಿತ, ವೀರಗಾಸೆ, ನಂದಿಧ್ವಜ, ವಿವಿಧ ಜಾನಪದ ಕಲಾತಂಡಗಳು ಹಾಗೂ ಸಾಂಸ್ಕೃತಿಕ ಮೆರವಣಿಗೆಗಳು ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದವು. ಮಾರ್ಗದುದ್ದಕ್ಕೂ ಸಾರ್ವಜನಿಕರು ಹೂಮಳೆಗೈದು ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮೆರವಣಿಗೆಯು ಹಿರೇಮನ್ನಾಪುರ ಗ್ರಾಮದ ಪ್ರಾಥಮಿಕ ಕೃಷಿಕ ಪತ್ತಿನ ಸಹಕಾರ ಸಂಘದಿಂದ ಆರಂಭವಾಗಿ ಮಾರುತೇಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಗವಿಸಿದ್ದೇಶ್ವರ ಶಾಲಾ ಆವರಣದಲ್ಲಿರುವ ಮುಖ್ಯ ವೇದಿಕೆಯನ್ನು ತಲುಪಿತು. ಈ ಸಂದರ್ಭದಲ್ಲಿ ಸುಮಾರು 200 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಕನ್ನಡ ಧ್ವಜಗಳನ್ನು ಹಿಡಿದು ಕನ್ನಡ ಪರ ಘೋಷಣೆಗಳನ್ನು ಕೂಗಿ ವಾತಾವರಣವನ್ನು ಕನ್ನಡಮಯಗೊಳಿಸಿದರು. ಸಾಹಿತ್ಯಾಭಿಮಾನಿಗಳು, ರೈತರು, ಸಹಕಾರ ಕ್ಷೇತ್ರದ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡಾಭಿಮಾನವನ್ನು ಮೆರೆದರು.
ಎರಡು ದಿನಗಳ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ವಿವಿಧ ಭಾಗಗಳಷ್ಟೇ ಅಲ್ಲದೆ ಹೊರ ಜಿಲ್ಲೆಗಳ ಸಾಹಿತ್ಯಾಸಕ್ತರೂ ಆಗಮಿಸಿದ್ದು, ಹಿರೇಮನ್ನಾಪುರ ಗ್ರಾಮ ಅಕ್ಷರ ಜಾತ್ರೆಯ ಸಂಭ್ರಮದಲ್ಲಿ ಮುಳುಗಿದೆ. ಗ್ರಾಮೀಣ ನೆಲೆಯಲ್ಲೇ ಇಷ್ಟೊಂದು ವೈಭವದಿಂದ ಸಮ್ಮೇಳನ ಆಯೋಜನೆಯಾಗಿರುವುದು ಕನ್ನಡ ಸಾಹಿತ್ಯದ ಮೇಲಿನ ಜನರ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಟಿಎಪಿಎಂಎಸ್ ಸಿಇಒ ಶಿವಕುಮಾರ ಮಾತನಾಡಿ, ಹಿರೇಮನ್ನಾಪುರದಲ್ಲಿ ನಡೆಯುತ್ತಿರುವ ಈ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಯಶಸ್ಸು ಕಂಡಿದೆ. ಗ್ರಾಮ, ನಗರ, ಅಕ್ಕಪಕ್ಕದ ತಾಲೂಕುಗಳು ಹಾಗೂ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿರುವುದು ಸಮ್ಮೇಳನವನ್ನು ನಿಜವಾದ ಅಕ್ಷರ ಜಾತ್ರೆಯನ್ನಾಗಿ ರೂಪಿಸಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಜನರ ಅಭಿಮಾನ ಈ ಸಮ್ಮೇಳನದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸ್ ಪಾಟೀಲ್, ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ, ರವೀಂದ್ರ ಬಾಕಳೆ, ವಿ.ಎಸ್. ಕಾಡಗಿಮಠ, ನಾಗಪ್ಪ ಬಿಳಿಯಪ್ಪನವರ್, ಜಗದೀಶ ಸೂಡಿ, ನಾಗರಾಜ ನಿಡಗುಂದಿ, ಉಮಾಪತಿ ಆರಾಳಗೌಡ್ರು, ಮಹಾಂತೇಶ ಜಾಲಿಗಿಡದ, ಹನುಮಂತಪ್ಪ ಯಾಪಲದಿನ್ನಿ, ತಿಪ್ಪಣ್ಣ ಪಾಲ್ಕಾರ, ಹನೀಫ್ ಬಿಳೆಕುದರಿ, ಮಲ್ಲಿಕಾರ್ಜುನ ಸೂಡಿ, ಸಿಪಿಐ ವಿಶ್ವನಾಥ ಹಿರೇಗೌಡ್ರು, ಪಿಎಸ್‌ಐ ಹನಮಂತಪ್ಪ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






















