ನವದೆಹಲಿ: ಭಾರತೀಯ ರೈಲ್ವೆಯ ಯೋಜನಾ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು, ಸರಕು ಸಾಗಣೆಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಮಹತ್ವದ ಸುಧಾರಣೆಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.
ಈ ವರ್ಷ ಜಾರಿಗೆ ತರಲಿರುವ 52 ಸುಧಾರಣೆಗಳ ಭಾಗವಾಗಿ ಹಲವು ಹೊಸ ನೀತಿಗಳನ್ನು ಪ್ರಕಟಿಸಲಾಗಿದ್ದು, ರೈಲ್ವೆ ಯೋಜನೆಗಳ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ.
ಇದನ್ನೂ ಓದಿ: ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!
ಕೌಶಲ್ಯ ಪ್ರಮಾಣೀಕರಣ ಚೌಕಟ್ಟು : ರೈಲ್ವೆ ಯೋಜನೆಗಳಿಗೆ ಕೌಶಲ್ಯ ಪ್ರಮಾಣೀಕರಣ ಚೌಕಟ್ಟು (Skill Certification Framework) ಜಾರಿಗೆ ತರಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. “ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೂಲಸೌಕರ್ಯ ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ, ಪ್ಲಂಬರ್‌ಗಳು, ವೆಲ್ಡರ್‌ಗಳು, ಫಿಟ್ಟರ್‌ಗಳು, ಮೇಸನ್‌ಗಳು ಮತ್ತು ಕಾಂಕ್ರೀಟ್ ಪರೀಕ್ಷಕರು ಸೇರಿದಂತೆ ಎಲ್ಲಾ ಕೆಲಸಗಾರರು ಉತ್ತಮ ತರಬೇತಿ ಪಡೆದಿರುವುದು ಅತ್ಯಗತ್ಯ. ಈ ಯೋಜನೆಯನ್ನು ಗರಿಷ್ಠ 24 ತಿಂಗಳಲ್ಲಿ ಎಲ್ಲಾ ರೈಲ್ವೆ ಯೋಜನೆಗಳಲ್ಲಿ ಜಾರಿಗೊಳಿಸಬಹುದು” ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರಿಗೆ ಕಠಿಣ ನಿಯಮ : ರೈಲ್ವೆ ಯೋಜನೆಗಳ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಗುತ್ತಿಗೆದಾರರ ಅರ್ಹತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಹೊಸ ನಿಯಮಗಳ ಪ್ರಕಾರ ಕೆಲಸ ಆರಂಭಿಸುವ ಮೊದಲು ಗುತ್ತಿಗೆದಾರರು 10 ಪ್ರತಿಶತ ಮುಂಗಡ ಕಾರ್ಯಕ್ಷಮತಾ ಭದ್ರತೆ ಒದಗಿಸಬೇಕು. ನಿವ್ವಳ ಮೌಲ್ಯದ ಶೇಕಡಾ 50ಕ್ಕಿಂತ ಹೆಚ್ಚು ಮೊಕದ್ದಮೆಗಳನ್ನು ಎದುರಿಸುತ್ತಿರುವ ಗುತ್ತಿಗೆದಾರರು ರೈಲ್ವೆ ಒಪ್ಪಂದಗಳಿಗೆ ಬಿಡ್ ಸಲ್ಲಿಸಲು ಅರ್ಹರಾಗಿರುವುದಿಲ್ಲ. ವೃತ್ತಿಪರ ಪರಿಹಾರ ವಿಮೆ ಹಾಗೂ ಎಲ್ಲಾ ಅಪಾಯ ವಿಮೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: TET ಪರೀಕ್ಷೆಯ ಹೊಸ ದಿನಾಂಕ ಘೋಷಣೆಗೆ ರಾಹುಲ್ ಆಗ್ರಹ
ಈ ಕ್ರಮಗಳು ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರನ್ನು ಉತ್ತೇಜಿಸುವುದರ ಜೊತೆಗೆ ಕಾನೂನು ವಿವಾದಗಳಿಗೆ ಹೆಚ್ಚು ಒತ್ತು ನೀಡುವ ಸಂಸ್ಥೆಗಳನ್ನು ನಿರುತ್ಸಾಹಗೊಳಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಸರಕು ಸಾಗಣೆಯಲ್ಲಿ ಹೊಸ ಬದಲಾವಣೆ : ಸರಕು ಸಾಗಣೆಯಲ್ಲಿ ಖಾಸಗಿ ವಲಯದ ನವೀನ ಆಲೋಚನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೈಗಾರಿಕೆಗಳಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೊಸ ಸರಕು ವ್ಯಾಗನ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿದೆ. ಇದೇ ವೇಳೆ, ಹಾರು ಬೂದಿಯ ಸಾಗಣೆಗೆ ಕಂಟೇನರ್ ಆಧಾರಿತ ವ್ಯವಸ್ಥೆ ಪರಿಚಯಿಸಲಾಗಿದೆ. ಇದರಿಂದ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಸಾಗಣೆ ಮತ್ತು ನಿರ್ವಹಣೆಯೂ ಸುಲಭವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!
ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರಗಳು ಮತ್ತು ಕೃಷಿ ಉತ್ಪನ್ನಗಳ ಸಾಗಣೆಯಲ್ಲೂ ಕಂಟೇನರ್ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಕಂಟೇನರ್ ರೈಲು ನಿರ್ವಾಹಕರಿಗೆ ಸಡಿಲಿಕೆ : ಕಂಟೇನರ್ ರೈಲು ನಿರ್ವಾಹಕರಿಗೆ ನಿಯಮಗಳನ್ನು ಸರಳಗೊಳಿಸಲಾಗಿದ್ದು, ದೇಶಾದ್ಯಂತ ಏಕೀಕೃತ ಪರವಾನಗಿ ವ್ಯವಸ್ಥೆ, ₹25 ಕೋಟಿ ಏಕರೂಪದ ನೋಂದಣಿ ಶುಲ್ಕ, 20 ವರ್ಷಗಳ ಯಶಸ್ವಿ ಕಾರ್ಯಾಚರಣೆಯ ಬಳಿಕ ನವೀಕರಣ ಶುಲ್ಕ ರದ್ದು ಮಾಡಲಾಗಿದೆ.
ಭೂಸ್ವಾಧೀನಕ್ಕೆ ‘ರೈಲ್ ಭೂಮಿ ಪೋರ್ಟಲ್’ : ರೈಲ್ವೆ ಯೋಜನೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ವೇಗಗೊಳಿಸಲು ‘ರೈಲ್ ಭೂಮಿ ಪೋರ್ಟಲ್’ ಪರಿಚಯಿಸಲಾಗಿದೆ. ಈ ಪೋರ್ಟಲ್‌ನಿಂದ ಭೂಸ್ವಾಧೀನಕ್ಕೆ ತೆಗೆದುಕೊಳ್ಳುವ ಸಮಯವು ರಾಜ್ಯವನ್ನು ಅವಲಂಬಿಸಿ 30ರಿಂದ 40 ಪ್ರತಿಶತದಷ್ಟು ಕಡಿಮೆಯಾಗಬಹುದು ಎಂದು ಸಚಿವಾಲಯ ಅಂದಾಜಿಸಿದೆ.
ಇದನ್ನೂ ಓದಿ: ರಾಜ್ಯಾದ್ಯಂತ 10 ಸಾವಿರ ಯುವ ಸಂಘ ಸ್ಥಾಪನೆ: ಪ್ರತಿ ಸಂಘಕ್ಕೆ ₹10 ಲಕ್ಷ
ಭಾರತದಲ್ಲಿ ವೇಗವಾಗಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗೆ ಕೌಶಲ್ಯಪೂರ್ಣ ಕಾರ್ಯಪಡೆ ಹಾಗೂ ಪರಿಣಾಮಕಾರಿ ಯೋಜನಾ ಅನುಷ್ಠಾನ ಅತ್ಯಗತ್ಯವಾಗಿದ್ದು, ಈ ಸುಧಾರಣೆಗಳು ರೈಲ್ವೆಯ ಕಾರ್ಯಕ್ಷಮತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿವೆ ಎಂದು ರೈಲ್ವೆ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





















