SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿಯಲ್ಲಿ NIA ದಾಳಿ : ಕೌಲಬಜಾರ್‌ನಲ್ಲಿ ಶೋಧ ಕಾರ್ಯಾಚರಣೆ

ಬಳ್ಳಾರಿಯಲ್ಲಿ NIA ದಾಳಿ : ಕೌಲಬಜಾರ್‌ನಲ್ಲಿ ಶೋಧ ಕಾರ್ಯಾಚರಣೆ

0
70
File Photo

ನಿಷೇಧಿತ ಉಗ್ರ ಸಂಘಟನೆಗಳ ಸಂಪರ್ಕ ಆರೋಪ: ಬಳ್ಳಾರಿಯಲ್ಲಿ ಎನ್‌ಐಎ ಶೋಧ ಕಾರ್ಯಾಚರಣೆ

ಬಳ್ಳಾರಿ: ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ಬಳ್ಳಾರಿ ನಗರದ ಕೌಲಬಜಾರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯ ಭಾಗವಾಗಿ ಎನ್‌ಐಎ ಅಧಿಕಾರಿಗಳ ತಂಡವು ಕೌಲಬಜಾರ್ ನಿವಾಸಿ ಅಬ್ದುಲ್ ಸಲಾಮ್ ಅವರ ಮನೆಗೆ ಭೇಟಿ ನೀಡಿ ಹಲವು ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿದೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು, ಮೊಬೈಲ್ ಫೋನ್ ಹಾಗೂ ಡಿಜಿಟಲ್ ಮಾಹಿತಿಯನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಭಯೋತ್ಪಾದನಾ ಪಿತೂರಿ: ಕರ್ನಾಟಕ ಸೇರಿ ದೇಶದಾದ್ಯಂತ NIA ದಾಳಿ

ಏನಿದು ಪ್ರಕರಣ? : ಎನ್‌ಐಎ ತನಿಖೆಯ ಪ್ರಕಾರ, ಆನ್‌ಲೈನ್ ಮೂಲಕ ಮೂಲಭೂತವಾದದ ಪ್ರಚಾರ, ಧಾರ್ಮಿಕ ಪ್ರಚೋದನೆ ಮತ್ತು ನಿಷೇಧಿತ ಉಗ್ರ ಸಂಘಟನೆಗಳ ಪರ ಚಟುವಟಿಕೆ ನಡೆಸಿದ ಆರೋಪದಡಿ ಎನ್‌ಟಿಆರ್ ಜಿಲ್ಲೆಯ ರೆಹಮತುಲ್ಲ ಷರೀಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಈ ಪ್ರಕರಣದಲ್ಲಿ ಬಳ್ಳಾರಿ ಮೂಲದ ಅಬ್ದುಲ್ ಸಲಾಮ್ ಅವರ ಸಂಪರ್ಕವೂ ಬೆಳಕಿಗೆ ಬಂದಿತ್ತು.

ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದ ಎನ್‌ಐಎ ಅಧಿಕಾರಿಗಳು ಇದೇ ವರ್ಷದ ಮಾರ್ಚ್ 26ರಂದು ಅಬ್ದುಲ್ ಸಲಾಮ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಡಿಜಿಟಲ್ ಸಾಕ್ಷ್ಯಗಳು, ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳು ಹಾಗೂ ಆನ್‌ಲೈನ್ ಸಂಪರ್ಕಗಳ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ: KBJNL ಇಇ ಬಸನಗೌಡ ಮನೆ ಸೇರಿ 7 ಕಡೆ ಲೋಕಾಯುಕ್ತರ ದಾಳಿ

ಮತ್ತೆ ಬಳ್ಳಾರಿಗೆ ಎನ್‌ಐಎ ಅಧಿಕಾರಿಗಳ ಭೇಟಿ : ಪ್ರಕರಣದ ತನಿಖೆಯನ್ನು ಮತ್ತಷ್ಟು ವಿಸ್ತರಿಸಿರುವ ಎನ್‌ಐಎ ಅಧಿಕಾರಿಗಳು ಮತ್ತೆ ಬಳ್ಳಾರಿಗೆ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿರುವುದು ಕುತೂಹಲ ಮೂಡಿಸಿದೆ. ತನಿಖೆಯ ಭಾಗವಾಗಿ ವಶಪಡಿಸಿಕೊಂಡಿರುವ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಇತರ ಡಿಜಿಟಲ್ ಮಾಹಿತಿಯನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಟ್ಟದಲ್ಲಿ ತನಿಖೆ : ದೇಶದ ವಿವಿಧ ಭಾಗಗಳಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಜಾಲಗಳನ್ನು ಪತ್ತೆಹಚ್ಚಲು ಹಾಗೂ ಆನ್‌ಲೈನ್ ಮೂಲಕ ನಡೆಯುತ್ತಿರುವ ಮೂಲಭೂತವಾದದ ಪ್ರಚಾರವನ್ನು ತಡೆಯಲು ಎನ್‌ಐಎ ಹಲವು ರಾಜ್ಯಗಳಲ್ಲಿ ಸಮನ್ವಯಿತ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಇದೇ ತನಿಖೆಯ ಭಾಗವಾಗಿ ಬಳ್ಳಾರಿಯಲ್ಲೂ ಶೋಧ ಕಾರ್ಯಾಚರಣೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್

ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಬಂಧನಗಳು ನಡೆದಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಗಳ ವಿಶ್ಲೇಷಣೆ ಬಳಿಕ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.