ದಾವಣಗೆರೆ: ನಮ್ಮವರೇ ಕೆಲವರು ವಿಜಯೇಂದ್ರ ಮತ್ತು ಡಿ.ಕೆ. ಶಿವಕುಮಾರ್ ಫ್ರೆಂಡ್ಸ್ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ಮಾತುಗಳಿಂದ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಆಗ್ನೇಯ ಪದವೀಧರ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಚುನಾವಣೆಯ ಬಳಿಕ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳ ಕುರಿತು ಮಾತನಾಡಿ, ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ವ್ಯವಸ್ಥಿತ ಷಡ್ಯಂತ್ರ ನಡೆಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪನವರು ಹಾಗೂ ಸಿದ್ದರಾಮಯ್ಯನವರದ್ದು ಅಂಡರ್‌ಸ್ಟ್ಯಾಂಡಿಂಗ್ ರಾಜಕಾರಣ, ವಿಜಯೇಂದ್ರ ಮತ್ತು ಡಿ.ಕೆ. ಶಿವಕುಮಾರ್ ಅವರದ್ದು ಹೊಂದಾಣಿಕೆ ರಾಜಕಾರಣ ಎಂದು ಹೊರಗಿನವರು ಯಾರೂ ಮಾತನಾಡುತ್ತಿಲ್ಲ, ನಮ್ಮವರೇ ಮಾತನಾಡುತ್ತಿದ್ದಾರೆ. ಯಾವ ಯಡಿಯೂರಪ್ಪನವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ, ಹಳ್ಳಿ ಹಳ್ಳಿಗೆ ಸುತ್ತಿ, ನಗರಕ್ಕೆ ಸೀಮಿತವಾಗಿದ್ದ ಭಾರತೀಯ ಜನತಾ ಪಾರ್ಟಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಕೆಲಸ ಮಾಡಿದರೋ, ಅಂತಹ ಹಿರಿಯ ನಾಯಕರ ಬಗ್ಗೆಯೇ ಇವತ್ತು ನಮ್ಮವರೇ ಕೆಲವರು ಅನುಮಾನ ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಅವರ ಮೇಲೆ 35 ಕೇಸ್‌ಗಳನ್ನು ಹಾಕಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇವತ್ತಿಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆ ಕೇಸ್‌ಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಆತ್ಮೀಯ ಮಿತ್ರರು ಎನ್ನುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಪಕ್ಷದ ವರಿಷ್ಠರು ನನಗೆ ರಾಜ್ಯದ ಅಧ್ಯಕ್ಷನಾಗಿ ಜವಾಬ್ದಾರಿ ಕೊಟ್ಟಾಗ, ನಾನು ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ದೋಸ್ತಿ ಮಾಡಿಕೊಂಡು ಸಂಘಟನೆ ಮಾಡಲು ಸಾಧ್ಯವೇ? ಅದೂ ಒಬ್ಬ ಯಡಿಯೂರಪ್ಪನವರ ಮಗನಾಗಿ ನಾನು ಈ ರೀತಿ ನಡೆದುಕೊಂಡರೆ ಆ ಭಗವಂತನೂ ಮೆಚ್ಚುವುದಿಲ್ಲ ಎಂದರು.
ರಾಜ್ಯದ ಅಧ್ಯಕ್ಷನಾಗಿ ಈ ವಿಚಾರಗಳನ್ನು ಹೇಳಲು ನನಗೇನೂ ಸಂಕೋಚವಿಲ್ಲ. ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮದೇ ಸರ್ಕಾರವಿತ್ತು. ಆದರೆ ಕಾಂಗ್ರೆಸ್ ನಮ್ಮ ಮೇಲೆ 40% ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಹೊರಿಸಿದಾಗ, ಅದನ್ನು ಸರಿಯಾಗಿ ಎದುರಿಸಲು ಸಾಧ್ಯವಾಗದೇ ಹೋದ ಕಾರಣ ಹಾಗೂ ನಮ್ಮ ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ನಾವು ಇಂದು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ನಮ್ಮ ಆಂತರಿಕ ಭಿನ್ನಾಭಿಪ್ರಾಯಗಳಿಂದಲೇ ಕಾರ್ಯಕರ್ತರಲ್ಲಿ ನಮ್ಮ ಮೇಲೆ ವಿಶ್ವಾಸ ಕಡಿಮೆಯಾಗುತ್ತಿರುವುದು ಅಷ್ಟೇ ಸತ್ಯ ಎಂದು ಮುಕ್ತವಾಗಿ ಒಪ್ಪಿಕೊಂಡರು.





















