SK Home Ad
Home ನಮ್ಮ ಜಿಲ್ಲೆ ವಿಜಯಪುರ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

0
481

ಆಲಮಟ್ಟಿ: ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯ ಜನರಲ್ಲಿ ಮಂದಹಾಸ ಮೂಡಿದೆ. ಆಲಮಟ್ಟಿ ಜಲಾಶಯಕ್ಕೆ ಸೋಮವಾರ 1,239 ಕ್ಯೂಸೆಕ್ ನೀರಿನ ಒಳಹರಿವು ಆರಂಭವಾಗಿದೆ.

ಕಳೆದ ವರ್ಷ (2025) ಮೇ 23ರಂದು ಜಲಾಶಯಕ್ಕೆ 34,939 ಕ್ಯೂಸೆಕ್ ಒಳಹರಿವು ಆರಂಭವಾಗಿತ್ತು. ಆದರೆ ಈ ವರ್ಷ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ತಡವಾಗಿ ಆರಂಭವಾದ ಕಾರಣ, ಸುಮಾರು ಎರಡು ತಿಂಗಳ ಬಳಿಕ ಜಲಾಶಯಕ್ಕೆ ನೀರಿನ ಹರಿವು ಆರಂಭವಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೊಯ್ನಾದಲ್ಲಿ 257 ಮಿ.ಮೀ., ನವಜಾದಲ್ಲಿ 244 ಮಿ.ಮೀ. ಹಾಗೂ ಮಹಾಬಲೇಶ್ವರದಲ್ಲಿ 473 ಮಿ.ಮೀ. ಮಳೆ ದಾಖಲಾಗಿದೆ.

ರಾಜಾಪುರ ಬ್ಯಾರೇಜ್‌ನಿಂದ ಪ್ರಸ್ತುತ 59,875 ಕ್ಯೂಸೆಕ್ ನೀರು ಹೊರಹರಿಯುತ್ತಿದ್ದು, ಅದರ ಪರಿಣಾಮವಾಗಿ ಆಲಮಟ್ಟಿ ಜಲಾಶಯಕ್ಕೆ 1,239 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

519.60 ಮೀಟರ್ ಗರಿಷ್ಠ ಮಟ್ಟ ಹಾಗೂ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ 20.654 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದೇ ವೇಳೆ, ಕೆಪಿಸಿಎಲ್ ಮೂಲಕ 100 ಕ್ಯೂಸೆಕ್ ಹಾಗೂ ಕುಡಿಯುವ ನೀರು ಮತ್ತು ಹಿನ್ನೀರಿನ ಬಳಕೆಗಾಗಿ 722 ಕ್ಯೂಸೆಕ್ ಸೇರಿ ಒಟ್ಟು 822 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.