SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಮೃತದೇಹವನ್ನೇ ಕುತ್ತಿಗೆ ಮಟ್ಟದ ನೀರಲ್ಲಿ ಹೊತ್ತು ಸಾಗಿಸಿದ ಗ್ರಾಮಸ್ಥರು

ಮೃತದೇಹವನ್ನೇ ಕುತ್ತಿಗೆ ಮಟ್ಟದ ನೀರಲ್ಲಿ ಹೊತ್ತು ಸಾಗಿಸಿದ ಗ್ರಾಮಸ್ಥರು

0
95

ಕಾರವಾರ: ದೇಶವು ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ತಲಕೇರಿ ಮಜರೆಯ ಜನರಿಗೆ ಇಂದಿಗೂ ಮೂಲಭೂತ ಸೌಲಭ್ಯಗಳು ಕನಸಾಗಿಯೇ ಉಳಿದಿವೆ. ಸಾರ್ವಜನಿಕ ರಸ್ತೆ ಹಾಗೂ ಭಾಸ್ಕೇರಿ ಹೊಳೆಗೆ ಶಾಶ್ವತ ಸೇತುವೆ ಇಲ್ಲದ ಕಾರಣ, ಪ್ರತಿಯೊಂದು ಮಳೆಗಾಲದಲ್ಲೂ ಇಲ್ಲಿನ ಜನರು ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮೃತದೇಹ ಸಾಗಿಸಲು ಕುತ್ತಿಗೆ ಮಟ್ಟದ ನೀರು ದಾಟಿದ ಗ್ರಾಮಸ್ಥರು : ಇತ್ತೀಚೆಗೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಾಗ, ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ಹೊತ್ತು ಕುತ್ತಿಗೆ ಮಟ್ಟದ ನೀರಿನಲ್ಲೇ ಸಾಗಿಸಬೇಕಾದ ಘಟನೆ ನಡೆದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸುರಕ್ಷಿತ ರಸ್ತೆ ಅಥವಾ ಸೇತುವೆ ಇಲ್ಲದ ಕಾರಣ, ಮೃತರಿಗೂ ಗೌರವಯುತವಾಗಿ ಅಂತಿಮಯಾತ್ರೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ

50ಕ್ಕೂ ಹೆಚ್ಚು ಕುಟುಂಬಗಳ ಬದುಕು ಸಂಕಷ್ಟದಲ್ಲಿ : ದೊಡ್ಡಹಿತ್ತಲಕೇರಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳು ಹಾಗೂ 150ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಇಲ್ಲದ ಕಾರಣ, ಕಳೆದ ಹಲವು ದಶಕಗಳಿಂದ ಖಾಸಗಿ ಜಮೀನು ಹಾಗೂ ತೋಟಗಳ ಮೂಲಕವೇ ಸಂಚಾರ ನಡೆಸುತ್ತಿದ್ದಾರೆ.

ಭಾಸ್ಕೇರಿ ಹೊಳೆ ಉಕ್ಕಿದರೆ ಗ್ರಾಮ ಸಂಪರ್ಕ ಸಂಪೂರ್ಣ ಕಡಿತ : ಸಿದ್ದಾಪುರ ಭಾಗದಲ್ಲಿ ಭಾರೀ ಮಳೆಯಾದಾಗ ಗ್ರಾಮದ ಮಧ್ಯೆ ಹರಿಯುವ ಭಾಸ್ಕೇರಿ ಹೊಳೆ ಉಕ್ಕಿ ಹರಿಯುತ್ತದೆ. ಪ್ರವಾಹದ ನೀರು ದಾರಿಗಳು, ತೋಟಗಳು ಹಾಗೂ ಮನೆಗಳ ಜಗುಲಿಯವರೆಗೂ ನುಗ್ಗುವುದರಿಂದ ಗ್ರಾಮ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತ್ತದೆ. ಹಲವಾರು ಕುಟುಂಬಗಳು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ

ಜೀವದ ಹಂಗು ತೊರೆದು ಸಂಚಾರ : ಗ್ರಾಮದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ದಿನನಿತ್ಯದ ಅಗತ್ಯಗಳಿಗಾಗಿ ಸೊಂಟದವರೆಗೆ, ಕೆಲವೊಮ್ಮೆ ಕುತ್ತಿಗೆ ಮಟ್ಟದ ನೀರಿನಲ್ಲೇ ನಡೆದು ಹೊರಹೋಗಬೇಕಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು, ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಕೆಲಸಕ್ಕೆ ತೆರಳುವ ಕಾರ್ಮಿಕರು ಪ್ರತಿದಿನ ಜೀವದ ಹಂಗು ತೊರೆದು ಸಂಚರಿಸುವ ಸ್ಥಿತಿ ಮುಂದುವರಿದಿದೆ.

ದಶಕಗಳಿಂದ ರಸ್ತೆ ಮತ್ತು ಕಾಲುಸಂಕಕ್ಕೆ ಮನವಿ : ಗ್ರಾಮಸ್ಥರು ಹಲವು ವರ್ಷಗಳಿಂದ ಭಾಸ್ಕೇರಿ ಹೊಳೆಗೆ ಶಾಶ್ವತ ಕಾಲುಸಂಕ ಹಾಗೂ ಗ್ರಾಮಕ್ಕೆ ಸಾರ್ವಜನಿಕ ರಸ್ತೆ ನಿರ್ಮಿಸಿಕೊಡುವಂತೆ ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಪ್ರತಿ ಬಾರಿ ತಾಂತ್ರಿಕ ಕಾರಣಗಳು, ಭೂ ವಿವಾದಗಳು ಹಾಗೂ ಆಡಳಿತಾತ್ಮಕ ತೊಂದರೆಗಳ ನೆಪ ನೀಡಿ ಕಾಮಗಾರಿ ಮುಂದೂಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ : “ನಾವು ಪೀಳಿಗೆಗಳಿಂದ ಇಲ್ಲೇ ವಾಸಿಸುತ್ತಿದ್ದೇವೆ. ಪ್ರತಿ ಮಳೆಗಾಲದಲ್ಲೂ ಜೀವಭಯದಲ್ಲೇ ಬದುಕಬೇಕಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಸೇರಿದಂತೆ ಪ್ರತಿಯೊಂದು ಅಗತ್ಯಕ್ಕೂ ಸಂಕಷ್ಟ ಎದುರಾಗುತ್ತಿದೆ. ಸರ್ಕಾರ ಕೂಡಲೇ ಶಾಶ್ವತ ರಸ್ತೆ ಹಾಗೂ ಕಾಲುಸಂಕ ನಿರ್ಮಿಸಿ ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಈ ದಶಕಗಳ ಹೋರಾಟಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಾದರೂ ಸ್ಪಂದಿಸಿ, ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.