SK Home Ad
Home ಅಂಕಣ ಅಂಕಣ ಬರಹ: ಹೇ ರಾಮ್… ಏಕೆ ಮೂಕನಾದೆ ಪ್ರಭು ಶ್ರೀರಾಮ್!

ಅಂಕಣ ಬರಹ: ಹೇ ರಾಮ್… ಏಕೆ ಮೂಕನಾದೆ ಪ್ರಭು ಶ್ರೀರಾಮ್!

0
68

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಏನೇನಂತ ಕರೆಯಲಿ ನಿನ್ನ… ಪ್ರಭು ಶ್ರೀರಾಮ… !
ಕೋಟ್ಯಂತರ ಭಕ್ತಾದಿಗಳ ಉಸಿರು, ಗ್ರಹಣ, ಶ್ರದ್ಧೆ, ದೈವ ಎಲ್ಲವೂ ನೀನೇ. ಮರ್ಯಾದಾ ಪುರುಷೋತ್ತಮ, ಆದರ್ಶಗಳ ಮಹಾನ್ ಸಾಗರ, ಕರುಣಾಮಯಿ ಎಲ್ಲವೂ ನೀನೇ.

ನಿನ್ನ ಸ್ಮರಣೆ ನಮ್ಮ ಪ್ರತಿ ಹೆಜ್ಜೆಯನ್ನಿಡುವಾಗ… ನಿನಗೆ ನಮ್ಮ ಸಮರ್ಪಣೆ ಪ್ರತಿ ಉಸಿರಾಡುವಾಗ. ಜೀವ ಜಲ, ಅನ್ನ ಆಹಾರ, ನೆಮ್ಮದಿ ಎಲ್ಲವನ್ನೂ ಕಂಡುಕೊಂಡದ್ದು ನಿನ್ನ ದೈವತ್ವದ ಅಗೋಚರ ಕೃಪೆಯಿಂದ ಎಂದು ನಂಬಿದವರು ಕೋಟ್ಯಂತರ ಮಂದಿ. ತೃಣನಪಿ ನ ಚಲತಿ ತೇನ ವಿನಾ….. ಎಂದೇ ಭಕ್ತರು ʻಇನ್ನಷ್ಟು ಬೇಕೆನ್ನ ಹೃದಯಕ್ಕೆ… ಎಂದು ಪೂಜಿಸಿದರು.

ಈ ಎಲ್ಲರ ಭಕ್ತಿ- ಶ್ರದ್ಧೆ, ನಿನ್ನ ಪ್ರಭಾವ, ನಿನಗಿರುವ ಶ್ರೇಷ್ಠತೆ ಈ ಎಲ್ಲವನ್ನೂ ಕಳೆಯುವ ಕಾರ್ಯ ನಿನ್ನ ಗುಡಿಯಲ್ಲೇ ನಡೆದಿದೆಯಲ್ಲ ಪ್ರಭು…! ಶ್ರದ್ದೆ, ಭಕ್ತಿ ಭಾವ, ಸಮರ್ಪಿಸಿದ ಕಾಣಿಕೆ ಎಲ್ಲವೂ ಕದ್ದು ಲೂಟಿಗೈದಿರುವ ವಾರ್ತೆ ಕರ್ಣಕಠೋರವೇ ಸರಿ. ಕದ್ದಿರುವುದು ನಿನ್ನ ಭವ್ಯ ಮಂದಿರದಲ್ಲಿ. ಅದರಲ್ಲೂ ನಿನ್ನ ಸಮ್ಮುಖದಲ್ಲಿ. ನಿನ್ನ ಹುಟ್ಟೂರಲ್ಲಿ. ನಿನ್ನ ಧರ್ಮ ಸಾಮ್ರಾಜ್ಯ ಸ್ಥಾಪನೆಯಾದ ನೆಲದಲ್ಲಿ!!

ಪವಿತ್ರ ಭಕ್ತನ ಶ್ರದ್ದೆ, ಪ್ರಾರ್ಥನೆ, ನಿಷ್ಕಲ್ಮಷ ನಂಬಿಕೆ ಧ್ವಂಸ ಮಾಡುವ ಕೃತ್ಯವಿದೆಯಲ್ಲ… ʻಹೇ ರಾಮ್’: ಇದನ್ನು ಮೌನವಾಗಿ ಸಹಿಸಿಕೊಂಡಿರುವುದೇಕೆ? ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ಸರ್ವರಿಗೂ ನ್ಯಾಯ, ನೆಮ್ಮದಿ, ಸುಂದರ ಬದುಕು ನೀಡಿ, ಕಳ್ಳಕಾಕರು, ವಿಧ್ವಂಸಕರು, ದುಷ್ಟ ಮನಸ್ಸಿನ ಜನರನ್ನು ನಿವಾರಿಸಿ, ಅಧಿಕಾರ ವಾಂಛೆ ಇಲ್ಲದ ರಾಜ್ಯ ಸ್ಥಾಪಿಸಿ ಆಳಿದವ ನೀನು. ಅಂಥ ಸುಭಿಷ್ಟ ರಾಮ ರಾಜ್ಯದ ಸಂಸ್ಕೃತಿ ಶ್ರೇಷ್ಠತೆಯ ಪರಂಪರೆಯನ್ನು ಕೇಳಿದ ಜನ ಅಯೋಧ್ಯೆಗೆ ನಿನ್ನ ಕರೆತಂದು ಕೂಡಿಸಿದಾಗ ಜನರ ಹೃದಯ ಸಾಮ್ರಾಟನಿಗೊಂದು ನೆಲೆ ಸಿಕ್ಕ ಸಂಭ್ರಮ ಪಟ್ಟವರು. ಅಂಥ ಆಳ್ವಿಕೆಯನ್ನೂ ನಿರೀಕ್ಷಿಸಿದರು. ಈಗ ಜನ ನಿನ್ನನ್ನೇ ಪ್ರಶ್ನಿಸುವ ಸ್ಥಿತಿಗೆ ತಂದೊಡ್ಡಿದ್ದಿರುವುದು ಅತ್ಯಂತ ಖೇದಕರ.

ನೀನು ಪ್ರಶ್ನಾರ್ಹನಲ್ಲ ರಾಮ. ಆದರೆ ನಿನ್ನನ್ನೂ ಪ್ರಶ್ನೆಗಳು ಬಿಡದಂತಾಯಿತಲ್ಲ? ಸಿಯಾ ರಾಮ್‌ನಿಗೆ ಆತನ ಜನ್ಮಸ್ಥಳದಲ್ಲಿ ಗುಡಿ ಬೇಡವೇ? ಎಂದು ಪ್ರಶ್ನಿಸಿದ್ದಕ್ಕೆ ಬಹುಶಃ ಯಾರೂ ಇಲ್ಲ ಎನ್ನಲಿಲ್ಲ. ನಿನ್ನ ಹುಟ್ಟು ನೆಲವನ್ನು ಯಾವ ಭಕ್ತನೂ ಪ್ರಶ್ನಿಸಲಿಲ್ಲ. ರಾಮನಿಗೊಂದು ಗುಡಿಯ ಕಟ್ಟುವೆ ಎಂದಾಗ ಅಬಾಲವೃದ್ಧರಾದಿಯಾಗಿ ಭಕ್ತಿಯಿಂದ ತಮ್ಮ ಕೈಲಾಗಿದ್ದನ್ನು ಸಮರ್ಪಣೆ ಮಾಡಿದರು. ಈ ಕಾರ್ಯಕ್ಕೆ ಮುಂದಾದವರ ಮೇಲೆ ವಿಶ್ವಾಸವಿಟ್ಟರು. ʻಪಾಪ ಶ್ರೀರಾಮ..’ ಎಂದರಲ್ಲವೇ ನಾಲ್ಕು ದಶಕಗಳ ಹಿಂದಿನ ವೈಭವಯುಕ್ತ ರಾಮರಥ ಯಾತ್ರೆ ದೇಶಾದ್ಯಂತ ಓಡಾಡಿದಾಗ ಶ್ರೀರಾಮ್ ಎಂದೇ ಒಂದೂಕಾಲು ರೂಪಾಯಿ ಕಾಸು ಸಮರ್ಪಣೆ ಮಾಡಿದರು. ಮಂದಿರ ಆಗಲೇಬೇಕೆಂದು ಹಳ್ಳಿಹಳ್ಳಿಗಳಲ್ಲಿ ಇಟ್ಟಿಗೆ ಪೂಜೆ ನಡೆಯಿತು. ಧನ ಕನಕಗಳನ್ನು ಹೇರಳವಾಗಿ ನೀಡಿದರು. ಆಗೊಬ್ಬರೂ ಈ ಹಣ, ತನ್ನ ಕಾಣಿಕೆ, ತನ್ನ ಪೂಜೆ, ಸಮರ್ಪಣೆ ಅಪವ್ಯಯವಾಗುತ್ತದೆಂಬ ಕಿಂಚಿತ್ತೂ ಅವಿಶ್ವಾಸ- ಅನುಮಾನಗಳನ್ನು ತಾಳಲಿಲ್ಲ.

ರಾಮಧ್ವಜ, ಭಗವಾಧ್ವಜ, ಎಲ್ಲ ನದಿ-ಜಲಮೂಲಗಳಿಂದಲೂ ಮಂದಿರಕ್ಕಾಗಿ ಪವಿತ್ರ ನೀರು- ಮಣ್ಣು ಕಳಿಸಿದರು. ಆಗಾರೂ ತಮ್ಮ ನಂಬಿಕೆಗೆ ದ್ರೋಹ ಆದೀತೆಂದು ಕ್ಷಣವೂ ಯೋಚಿಸಲಿಲ್ಲ. ನ್ಯಾಯಾಲಯದ ತೀರ್ಪು ರಾಮನ ಪರವಾಗಲೆಂದು ಪ್ರಾರ್ಥಿಸಿದರು ಆಗ ಎಲ್ಲರೂ!

ಪ್ರಾರ್ಥನೆ ಫಲ ಕೊಟ್ಟಿತು. ಇಡೀ ಹಿಂದೂಸ್ತಾನವಷ್ಟೇ ಅಲ್ಲ. ವಿಶ್ವದಾದ್ಯಂತ ಅಯೋಧ್ಯಾ ಹೆಸರು ಮತ್ತೊಮ್ಮೆ ಮೊಳಗಿತು. ಅಯೋಧ್ಯೆ ಎನ್ನುವ ಶಬರಿ ಮತ್ತೊಮ್ಮೆ ರಾಮನ ಬರುವಿಕೆಗಾಗಿ ಸಂಭ್ರಮಿಸಿತು. ನ್ಯಾಯಾಲಯದ ತೀರ್ಪು ಸರ್ವಸಮ್ಮತ ಎಂದೇ ಮಾನ್ಯ ಮಾಡಿದರು. ಆಗಾಗ ವಿರೋಧಿಸಿದ ಧ್ವನಿ ದೇಗುಲ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಲಿಲ್ಲ. ಬದಲಾಗಿ ಶಕ್ತಾನುಸಾರ ನೆರವಾದರು.

ಕಟ್ಟುವ ಕಾರ್ಯ ಆರಂಭವಾಯಿತು ನೋಡಿ. ಆಗ ಶುರುವಾಯಿತು. ಅದರ ಲಾಭ, ಕೀರ್ತಿ ಪಡೆಯುವ ಉತ್ಸಾಹ-ಪೈಪೋಟಿಗಳು!

ಈಗ ಭವ್ಯ ಮಂದಿರದಲ್ಲಿ ವಿರಾಜಮಾನನಾದ ನಿನ್ನ ಕಣ್ಣೆದುರೇ ಎಲ್ಲ ರಾಕ್ಷಸ ಗಣಗಳ ದೈತ್ಯ ನೃತ್ಯ ಆರಂಭವಾಗಿದೆ. ಈಗ ಜನ ಪ್ರಶ್ನಿಸುವುದು ನಿನ್ನನ್ನೇ! ನಿನ್ನನ್ನು ಕಳಂಕಿತನನ್ನಾಗಿಸಲು ನಡೆದ ಯತ್ನ ನಾಲ್ಕ ದಶಕಗಳಿಂದ ಗೊತ್ತಾಗಲಿಲ್ಲವೇ? ನಿನ್ನ ನಾಮಬಲದಲ್ಲಿ ರಾಜಕಾರಣವಾಗುತ್ತಿದೆ ಎಂಬುದು ತಿಳಿದಿಲ್ಲವೇ?

ನಿನ್ನ ಹೃದಯವಂತಿಕೆ, ಆದರ್ಶಗಳನ್ನು ಕೆಲವೇ ಮಂದಿ, ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ರಾಮ, ನಿನಗೆ ತಿಳಿದಿತ್ತಲ್ಲವೇ? ಆದರೂ ಮೌನಿ ಏಕಾದೆ?

ಗೊತ್ತು. ನಿನಗೆ ಬೇಡದಿದ್ದರೂ ಜನ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನುವುದು. ನಿನಗಾಗಿ ಮಂದಿರ ಕಟ್ಟಲೇಬೇಕು. ಅದೂ ನಿನ್ನ ಜನ್ಮಸ್ಥಳದಲ್ಲೇ ಎನ್ನುವುದು ಜನರ ಪೂಜನೀಯ ಭಾವನೆಯಾಗಿತ್ತು.

ಇಟ್ಟಿಗೆ, ಕುಂಕುಮಾರ್ಚನೆ, ಪೂಜೆ, ಪುನಸ್ಕಾರ, ರಾಮ ಭಜನೆ, ನಿಧಿ ಸಂಗ್ರಹಗಳಿಗೆಲ್ಲಕ್ಕೂ ಜನ ನೋಡಿದ್ದೂ ನಿನ್ನನ್ನೇ ಎನ್ನುವುದೂ ಗೊತ್ತು. ಆದರೆ ಇದರೊಂದಿಗಿನ ಅಧಿಕಾರದ ವಾಂಛೆ ಮತ್ತು ಜನರ ಭಕ್ತಿ ಭಾವನೆಗಳೊಂದಿಗೆ ಆಟಕ್ಕೆ ತಿಳಿ ಹೇಳುವ ಕಾರ್ಯ ಆಗಲೇ ಇಲ್ಲ. ನೀನು ಮೂಕಸ್ಮಿತನಾದೆ!

ಮಂದಿರ ನಿರ್ಮಾಣಕ್ಕೆ ನಿಯೋಜಿಸಿದ ಜನ ಎಂಥವರು? ಜವಾಬ್ದಾರಿ ಹೊತ್ತವರು ಭ್ರಷ್ಟ- ಕಪಟ ಮನಸ್ಸುಗಳು, ರಾಜ ಧರ್ಮ ಮೀರಿದ, ಅಧರ್ಮವಂತರು ಎನ್ನುವುದು ಆಗಲೇ ರಾಮ ನೀನು ಎಚ್ಚರಿಸಿದ್ದರೆ ಇವತ್ತು ನಿನ್ನ ಧೀಶಕ್ತಿ ಪ್ರದರ್ಶನವಾಗುತ್ತಿತ್ತು ಅಲ್ಲವೇ?

ಯಾಕೆ ಮೌನಿಯಾದೆ; ಯಾಕೆ ನಿಗೂಢನಾದೆ… ಅಯ್ಯೋ ರಾಮ! ಮಂದಿರ ಕಟ್ಟೋಣ ಎನ್ನುವ ದಿನದಿಂದ ಇಂದಿನವರೆಗೆ ಎಲ್ಲವುಗಳ ಮುಂದಾಳತ್ವ ವಹಿಸಿದವರೆಲ್ಲರೂ ನಿನ್ನನ್ನು ಏಣಿಯಾಗಿಸಿಕೊಂಡರು.. ಈಗ ನಿನಗೆ ಅವಮರ್ಯಾದೆ, ಅಗೌರವ ತಂದರು. ಅಧಿಕಾರ, ಹಣ, ದೌಲತ್ತುಗಳ ಬೆನ್ನುಬಿದ್ದರು.

ನಿನ್ನ ಪ್ರಾಣ ಪ್ರತಿಷ್ಠಾಪನೆಯ ದಿನ ಕೇಳಬಹುದಿತ್ತಲ್ಲ. ದೇಶಾದ್ಯಂತ ರಥಯಾತ್ರೆ ನಡೆಸಿದ ಎಲ್.ಕೆ.ಅಡ್ವಾಣಿ ಎಲ್ಲಿ? ಮುರಳಿ ಮನೋಹರ ಜೋಶಿ, ಅಶೋಕ ಸಿಂಘಲ್, ಉಮಾ ಭಾರತಿ ಇವರೆಲ್ಲ ಎಲ್ಲಿದ್ದಾರೆ. ಏಕೆ ಬಂದಿಲ್ಲ ಎಂದು ನೀನು ಕೇಳಲಿಲ್ಲ. ಬರಗೊಡದವರಿಗೆ ನಿಜ ಭಕ್ತಿಯನ್ನೂ ಕೊಡಲಿಲ್ಲ!

ಈ ದೇಶದ ಪ್ರಥಮ ಪ್ರಜೆಯನ್ನೂ ನೀನು ಕರೆಸಿಕೊಳ್ಳಲಿಲ್ಲ. ಅಂದು ಸಂಕಲ್ಪ ತೊಟ್ಟು ನಿನ್ನ ಪೂಜೆ ಮಾಡಿ ಹಕ್ಕು ಸ್ಥಾಪಿಸಿದವರು ಜನತೆಗೆ ಕೊಟ್ಟ ಭರವಸೆ ʻರಾಮನನ್ನು ಅಯೋಧ್ಯೆಗೆ ಕರೆತಂದಿದ್ದೇವೆ; ಚರಿತ್ರೆಯ ಕಹಿ ದೂರ ಮಾಡಿದ್ದೇವೆ; ಇತಿಹಾಸ ಪುನರ್‌ಪ್ರತಿಷ್ಠಾಪನೆಯಾಗುತ್ತಿದೆ. ನಾವು ರಾಮನ ಆದರ್ಶವನ್ನು ಪಾಲಿಸುತ್ತೇವೆ. ಈ ದೇಶದಲ್ಲಿ ರಾಮ ರಾಜ್ಯದ ಸ್ಥಾಪನೆಯಾಗುತ್ತದೆ. ನಿನ್ನ ಮರ್ಯಾದೆ. ಜನರ ಭಕ್ತಿಗೆ ಕಿಂಚಿತ್ತೂ ಕಳಂಕ ತರುವುದಿಲ್ಲ’ ಎಂಬುದು.

ಆಗ ನಿನ್ನ ಮಂದಿರ ನೋಡಿಕೊಳ್ಳುವುದಕ್ಕೆ ಒಂದು ಟ್ರಸ್ಟ್ ರಚಿಸಿ, ಇವರೆಲ್ಲ ಪ್ರಾಮಾಣಿಕರು, ಉತ್ತಮ ಆಡಳಿತಗಾರರು ಎಂದು ಸಾರಲಾಯಿತು. ಆಗಲೇ ಹುಟ್ಟಿತು ಸಂಶಯ.

ರಾಮನನ್ನೇ ಅಪಹರಿಸಿದರು! ನಿನ್ನ ಮೈ ತುಂಬಲೆಂದು ಕೊಟ್ಟ ಅದೇ ಚಿನ್ನ, ವಜ್ರ, ವೈಢೂರ್ಯಗಳ ಸರ, ಬೆಳ್ಳಿ ಇಟ್ಟಿಗೆಗಳು, ಒಂದು ರೂಪಾಯಿಯಿಂದ ಹತ್ತಾರು ಕೋಟಿಯವರೆಗೆ ನೀಡಿದ ಕಾಣಿಕೆ ಎಲ್ಲವುಗಳ ಲೂಟಿ ಆಗಿದೆಯಲ್ಲ, ಇದರಿಂದ ಭಕ್ತರ ಹೃದಯ ಛಿದ್ರವಾಗಿದೆ. ಇಲ್ಲಿ ನಡೆದದ್ದು ಕೇವಲ ಆಡಳಿತ ಲೋಪವಲ್ಲ. ಬದಲಿಗೆ ಮನುಷ್ಯನ ಸಾಂಸ್ಕೃತಿಕ ಪತನ, ಭವ್ಯ ಅಮೃತ ಶಿಲೆ ಬಳಸಿ ಮಂದಿರದಲ್ಲಿ ನಿನ್ನ ಗರ್ಭಗುಡಿಯ ಪಕ್ಕದಲ್ಲೇ ನಿಂತು ಕಳ್ಳತನ ಮಾಡುವ, ಅನೈತಿಕ ವ್ಯವಹಾರ ನಡೆಸುವ ಮಂದಿಯ ಆಟಾಟೋಪ, ಧೈರ್ಯ ಹೇಸಿಗೆ ತರುತ್ತದೆ. ನೈತಿಕತೆ ಕುಸಿದು ಬಿದ್ದವಲ್ಲವೇ?

‘ನಾನೇ ರಾಮನನ್ನು ಕರೆತಂದೆ’ ಎಂದವರು, ನಿನ್ನ ಹೆಸರಿನಲ್ಲಿ ಅಧಿಕಾರ ಪಡೆದರು. ನಿನ್ನ ನಾಮಬಲದಿಂದ ಗದ್ದುಗೆ ಹಿಡಿದರು. ಈಗ ಕೋಟ್ಯಂತರ ರೂಪಾಯಿ ಲೂಟಿಗೆ ಜವಾಬ್ದಾರಿಯನ್ನೇ ತೆಗೆದುಕೊಳ್ಳುತ್ತಿಲ್ಲ. ಅವರನ್ನೂ ಮೂಕರನ್ನಾಗಿಸಿದ್ದೀಯಾ -ರಾಮ?

ಇಲ್ಲಿ ನಡೆದದ್ದು ಕೇವಲ ಆಡಳಿತ ಲೋಪವಲ್ಲ. ಬದಲಿಗೆ ಮನುಷ್ಯನ ಸಾಂಸ್ಕೃತಿಕ, ನೈತಿಕ ಪತನ. ಭವ್ಯ ಅಮೃತ ಶಿಲೆ ಬಳಸಿ ನಿನಗೆ ಗರ್ಭಗುಡಿ ಕಟ್ಟಿ ಆರತಿ ಬೆಳಗಲಾಗುತ್ತಿದೆ. ಅಲ್ಲಿಯೇ ಪಕ್ಕನಿಂತು ಹುಂಡಿ ಕಳ್ಳತನ ಮಾಡುವ, ಅನೈತಿಕ ವ್ಯವಹಾರ ನಡೆಸುವ ಮಂದಿಯ ಆಟಾಟೋಪ, ಧೈರ್ಯ ಹೇಸಿಗೆ ತರುತ್ತದೆ. ನೈತಿಕತೆ ಕುಸಿದು ಬಿದ್ದಲ್ಲವೇ?

ತಮಾಷೆ ಎಂದರೆ ಈಗ ಭಗವಂತನಾದ ನಿನಗೆ ಹೆದರುವುದನ್ನು ಬಿಟ್ಟು, ಸಿಸಿ ಕ್ಯಾಮೆರಾಗಳಿಗೆ ಹೆದರುತ್ತಿದ್ದಾರೆ. ಹೇಗಿದೆ ನೋಡಿ. ಅಂದು ಪಿತೃ ವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೊರಟಾಗ ನಿನ್ನ ಪಾದುಕೆಯನ್ನು ಇಟ್ಟು ಭರತ ರಾಜ್ಯಭಾರ ಮಾಡಿದ. ಹೊರತು, ನಿನ್ನ ಸಾಮ್ರಾಜ್ಯದ ಸಂಪತ್ತನ್ನು ಮುಟ್ಟಲಿಲ್ಲ. ಈಗ ನೀನು ಅಯೋಧ್ಯೆಗೆ ಮರಳಿ ಬಂದಿದ್ದೀಯಾ. ಇದನ್ನು ಸಂಭ್ರಮಿಸುವ ಕ್ಷಣದಲ್ಲಿ ನಿನ್ನ ಸಂಪತ್ತಿಗೆ ಕನ್ನ ಹಾಕುವ ರಾಕ್ಷಸ ಬುದ್ಧಿಯವರು ಬೆಳೆದಿದ್ದಾರೆ!.

ಭಕ್ತರಿಗೆ ರಾಮ ಬೇಕಾಗಿದ್ದಾನೆ.. ಆದರೆ ಅಧಿಕಾರ ನಡೆಸುತ್ತಿರುವವರಿಗೆ ರಾಮನ ಆದರ್ಶ ಬೇಕಾಗಿಲ್ಲ. ಈಗ ನಡೆದಿರುವ ಅವ್ಯವಹಾರ ಸಾಮಾನ್ಯ ಜನರಿಂದಲ್ಲ. ಪ್ರಧಾನಿ
ಕಾರ್ಯಾಲಯದಲ್ಲೇ ಹತ್ತು ವರ್ಷಗಳ ಕಾಲ, ಕೇಂದ್ರ ಸ್ಥಾನದಲ್ಲಿದ್ದ ವ್ಯಕ್ತಿ ಈ ಟ್ರಸ್ಟಿನ ನೇತೃತ್ವ ವಹಿಸಿಕೊಂಡವರಿಂದ. ಅದೇ ಟ್ರಸ್ಟ್ ಸಮಿತಿಯವರಿಂದ. ನಿನ್ನ ಮಂದಿರ ಕಟ್ಟುವಾಗಲೇ ಅಲ್ಲಿಯ ರಿಯಲ್ ಎಸ್ಟೇಟ್ ದಂಧೆಯ ಬಗ್ಗೆ, ಟ್ರಸ್ಟಿನ ವ್ಯವಹಾರಗಳ ಬಗ್ಗೆ ಬಹಳ ಆರೋಪ ಬಂದಿತ್ತು. ಅಯೋಧ್ಯೆಯ ರೆಸಾರ್ಟ್‌ಗಳು, ಹೋಟೆಲ್‌ಗಳು ಇತ್ಯಾದಿಗಳೆಲ್ಲ ಹುಂಡಿಯಿಂದ ಕದ್ದ ಹಣದಿಂದ ಎನ್ನುವುದೀಗ ಬಯಲಿಗೆ ಬರುತ್ತಿದೆ. ಅಯೋಧ್ಯೆಯ ಕಳ್ಳತನದ ಮಸಿ ಕನ್ನಡಿಗರಿಗೂ ತಾಗಿದೆ ಎಂದು ಅಖಿಲೇಶ್ ಯಾದವ್ ಬೆರಳು ಮಾಡಿ ತೋರಿಸಿದ್ದಾರೆ. ಆರೋಪದಲ್ಲಿ ಸತ್ಯಾಂಶ ಇಲ್ಲದಿಲ್ಲ. ಇಲ್ಲಿದ್ದಾಗ ಆ ವ್ಯಕ್ತಿಯ ನಡತೆಯ ಬಗ್ಗೆ ದೂರು ಹೇಳಿದವರು ನೆನಪಿಸಿಕೊಳ್ಳುತ್ತಿದ್ದಾರೆ, ‘ದೂರು ಹೇಳಿದ ತಪ್ಪಿಗೆ ಅವರನ್ನೆಲ್ಲ ಹೊರ ಹಾಕಲಾಯಿತು’ ಎಂಬುದನ್ನು!

ನಿನ್ನ ಪರಮ ಭಕ್ತ ಮೋಹನದಾಸ್ ಕರಮಚಂದ್ ಗಾಂಧಿ ಕೊನೆಯುಸಿರೆಳೆದದ್ದು ʻಹೇ ರಾಮ್..’ ಎನ್ನುತ್ತಾ… ಆ ಮಹಾತ್ಮ ಸಾರ್ವಜನಿಕ ಜೀವನದ ಉದ್ದಕ್ಕೂ ಹೇಳುತ್ತಲೇ ಬಂದ… ʻಧಾರ್ಮಿಕ ಸಂಸ್ಥೆಗಳಲ್ಲಿ, ಜನರ ಭಕ್ತಿ ಭಾವದಲ್ಲಿ, ಶ್ರದ್ಧೆ-ನಂಬಿಕೆಗಳಲ್ಲಿ ಹಣ- ವೈಭವ ಹೆಚ್ಚಾದಷ್ಟೂ ಅಲ್ಲಿ ಆಧ್ಯಾತ್ಮಿಕತೆ, ಸಂಸ್ಕೃತಿ, ಸಮಭಾವ ಕರಗುತ್ತ ಹೋಗುತ್ತದ. ಬಾಹ್ಯ ಪ್ರದರ್ಶನ, ಆಡಂಬರದ ಭಕ್ತಿಗೆ ಪ್ರಾಧಾನ್ಯತೆ ಬೇಡ’ ಎಂಬುದು ಸ್ವರಾಜ್ಯ ನೀಡಿದ ನಮ್ಮ ಮಹಾತ್ಮನ ಮೊದಲ ತತ್ವವಾಗಿತ್ತು. ಅಂತಹ ನಿನ್ನ ಭಕ್ತನಿಗೆ ಗುಂಡು ಹಾರಿಸಲಾಯಿತಲ್ಲ ರಾಮ… ಹೇ ರಾಮ್! ಈಗ ಕಳ್ಳತನ, ಕಪಟತನ ಹೊರಬರಲು ನಿನ್ನ ಪ್ರಭಾವವೇ ಕಾರಣ ಎಂಬದು ಜನರ ನಂಬಿಕೆ ಪ್ರಭು. ಹುಂಡಿಗೆ ಕನ್ನ ಹಾಕಿದವರನ್ನು ಬೆತ್ತಲೆ ನಿಲ್ಲಿಸಿದವರು ಕೂಡ ‘ಶ್ರೀರಾಮನೇ ಪ್ರೇರಣೆ’ ಎಂದು ಹೇಳುತ್ತಿದ್ದಾರೆ.

ಏನೇ ಆಗಲಿ. ನೀನೀಗ ಹೇಳುವ ಸಮಯ ಬಂದಿದೆ. ಈ ಅಧಿಕಾರ ಲಾಲಸಿಗಳಿಗೆಲ್ಲ ಪಾಠ ಕಲಿಸಿ ಎಂದು!. ಒಬ್ಬ ಅಗಸ ಹೇಳಿದನೆಂದು ಸೀತೆಯನ್ನೇ ಪರಿತ್ಯಜಿಸಿದವ ನೀನು. ಅಷ್ಟು ನಿಷ್ಕಪಟ ಮತ್ತು ಜನರ ಮಾತಿಗೆ ಮನ್ನಣೆ ನೀಡಿದ ಆದರ್ಶವಾದಿ. ಈಗ ನಿನ್ನ ನಾಮ ಬಲ ಅಷ್ಟೇ ಸಾಕು ಎನ್ನುವವರಿಗೆ, ಅಂಧಾದುಂಧಿ ಆಡಳಿತಗಾರರಿಗೆ ʻತಿರಸ್ಕರಿಸಿ, ಮೂಲಸ್ಥಾನಕ್ಕೆ ಕಳುಹಿಸಿ’ ಎಂದು ಕೋಟ್ಯಂತರ ಭಕ್ತರಿಗೆ ಅಣತಿ ನೀಡುವಂತವನಾಗು.. ಕೇವಲ ಕಲ್ಲಿನ ಮೂರ್ತಿಯಲ್ಲಿ ನಿನ್ನನ್ನು ನೋಡುತ್ತಿರುವ ಬೂಟಾಟಿಕೆ ಕ್ರಿಮಿಗಳನ್ನು ಗರ್ಭಗುಡಿಯಿಂದ ಹೊರನೂಕಿ ಸರ್ವಸಮುದಾಯದ ಸೇವೆಯ ಬುದ್ಧಿಯನ್ನು ಕರುಣಿಸು. ಹೇ ರಾಮ್… ಅಯ್ಯೋ ರಾಮ!