SK Home Ad
Home ಸುದ್ದಿ ದೇಶ ರಾಘವ ರಾಜಕೀಯ ಪ್ರವೇಶದ U-ಟರ್ನ್: ಲಾರೆನ್ಸ್ ಆಘಾತಕಾರಿ ನಿರ್ಧಾರ

ರಾಘವ ರಾಜಕೀಯ ಪ್ರವೇಶದ U-ಟರ್ನ್: ಲಾರೆನ್ಸ್ ಆಘಾತಕಾರಿ ನಿರ್ಧಾರ

0
73

ತಿರುಚ್ಚಿ ಪೂರ್ವ ಉಪಚುನಾವಣೆ: ಸ್ಪರ್ಧೆ ವದಂತಿಗೆ ವಿಡಿಯೊ ಮೂಲಕ ಸ್ಪಷ್ಟನೆ – ಕುಟುಂಬ, ಟ್ರಸ್ಟ್ ಮಕ್ಕಳ ನೋವು ಕಂಡು ಭಾವುಕರಾದ ರಾಘವ ಲಾರೆನ್ಸ್

ಚೆನ್ನೈ : ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಅವರು ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತು ಮಂಗಳವಾರ ಅಧಿಕೃತ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾವು ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಿರುಚ್ಚಿ ಪೂರ್ವ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಕುರಿತು ಮಾತನಾಡಿದ ಅವರು, “ನಾನು ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಸುದ್ದಿ ಹರಡಿದ ಬಳಿಕ ಅನೇಕರು ನನ್ನನ್ನು ಅಭಿನಂದಿಸಿದರು. ಹಲವರು ‘ನೀವು ಸ್ಪರ್ಧಿಸಿ, ನಾವು ಗೆಲ್ಲಿಸುತ್ತೇವೆ’ ಎಂದು ಹೇಳಿದ್ದರು. ನಾನು ತೆರಳುವ ಎಲ್ಲೆಡೆ ಜನರು ನನ್ನನ್ನು ‘ಶಾಸಕರೇ’ ಎಂದು ಕರೆಯಲು ಆರಂಭಿಸಿದ್ದರು. ಜನರ ಈ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಲಿಂಡರ್ ಸ್ಫೋಟ

ಆದರೆ, ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ತಮಿಳುನಾಡು ವಿಕ್ಟರಿ ಪಾರ್ಟಿ (TVK) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪರವಾಗಿ ತಳಮಟ್ಟದಲ್ಲಿ ಶ್ರಮಿಸಿದ ಹಲವಾರು ಕಾರ್ಯಕರ್ತರಿದ್ದಾರೆ. ಅಂತಹ ಸಂದರ್ಭದಲ್ಲಿ ನಾನು ಹೋಗಿ ಅವರ ಅವಕಾಶವನ್ನು ಕಸಿದುಕೊಳ್ಳುವುದು ಸರಿಯಲ್ಲ. ಆದ್ದರಿಂದ ನಾನು ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ರಾಜಕೀಯ ಪ್ರವೇಶ ಖಚಿತ : ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಕಾರಣಕ್ಕೆ ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಭಾವಿಸಬಾರದು ಎಂದು ಲಾರೆನ್ಸ್ ಸ್ಪಷ್ಟಪಡಿಸಿದ್ದಾರೆ. “ಆತುರಪಡಬೇಡಿ. ನಾನು ರಾಜಕೀಯಕ್ಕೆ ಖಂಡಿತವಾಗಿ ಬರುತ್ತೇನೆ. ಆದರೆ, ನಾನು ನಿಜವಾಗಿಯೂ ಜನರಿಗೆ ಒಳ್ಳೆಯದು ಮಾಡಬಹುದಾದ ಸರಿಯಾದ ಪಕ್ಷವನ್ನೇ ಆಯ್ಕೆ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮೊದಲ ಬಾರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ವಿಳಂಬ: ಜೈಪುರ ಕೇಂದ್ರದಲ್ಲಿ ಹೈಡ್ರಾಮಾ

ವಿವಾದದಿಂದ ಕುಟುಂಬಕ್ಕೂ ನೋವು : ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ತಾವು ಹೇಳಿದ ಕೆಲವು ಮಾತುಗಳನ್ನು ಉದ್ದೇಶಪೂರ್ವಕವಾಗಿ ತಿರುಚಿ ವಿವಾದ ಸೃಷ್ಟಿಸಲಾಗಿದೆ ಎಂದು ಲಾರೆನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. “ಪತ್ರಿಕಾಗೋಷ್ಠಿಯ ಬಳಿಕ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ತಿಳಿದ ತಕ್ಷಣ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದೆ. ನಾನು ಜನರ ಬಗ್ಗೆ ತಪ್ಪಾಗಿ ಮಾತನಾಡುವ ವ್ಯಕ್ತಿಯಲ್ಲ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿದ್ದಾರೆ” ಎಂದು ಹೇಳಿದ್ದಾರೆ.

ಈ ವಿವಾದದಿಂದ ತಮ್ಮ ಟ್ರಸ್ಟ್‌ನಲ್ಲಿ ಓದಿದ ಮಕ್ಕಳು ಹಾಗೂ ಕುಟುಂಬದವರು ಕೂಡ ಮಾನಸಿಕವಾಗಿ ನೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ನನ್ನ ಟ್ರಸ್ಟ್‌ನ ಮಕ್ಕಳು ಕರೆ ಮಾಡಿ ಅಳುತ್ತಿದ್ದರು. ನನ್ನ ತಾಯಿಯೂ ಈ ಘಟನೆಗಳಿಂದ ತುಂಬಾ ಬೇಸರಗೊಂಡಿದ್ದರು. ಆದ್ದರಿಂದಲೇ ನಾನು ಈ ವಿಡಿಯೊ ಮೂಲಕ ನೇರವಾಗಿ ಜನರೊಂದಿಗೆ ಮಾತನಾಡಲು ನಿರ್ಧರಿಸಿದೆ” ಎಂದು ಭಾವುಕರಾಗಿ ಹೇಳಿದ್ದಾರೆ.

ಇದನ್ನೂ ಓದಿ: WhatsAppನಲ್ಲಿ ಬಹುನಿರೀಕ್ಷಿತ ಫೀಚರ್ ಮಹತ್ವದ ಪ್ರೈವೆಸಿ ಅಪ್‌ಡೇಟ್

ರಾಘವ ಲಾರೆನ್ಸ್ ಅವರ ಈ ಸ್ಪಷ್ಟನೆಯೊಂದಿಗೆ ತಿರುಚ್ಚಿ ಪೂರ್ವ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.