ಅಪರ್ಣಾ ವಸ್ತಾರೆ ಅವರ ಕೊನೆಯ ಚಿತ್ರ ‘ಗ್ರಾಮಾಯಣ’ ಜುಲೈ 3ರಂದು ತೆರೆಗೆ
ಬೆಂಗಳೂರು: ವಿನಯ್ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ಕನ್ನಡ ಚಿತ್ರ ‘ಗ್ರಾಮಾಯಣ’ ಇದೇ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರಕ್ಕಾಗಿ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಲಹರಿ ಫಿಲಮ್ಸ್ ನಿರ್ಮಾಣದ ಈ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡಿದ್ದು, ಗ್ರಾಮೀಣ ಸೊಗಡಿನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ‘ಏನೇ ಹೇಳು ಕುಸುಮ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ನಿಹಾಲ್ ತಪ್ರೊ ಹಾಗೂ ಸಾಕ್ಷಿ ಕಲ್ಲೂರ್ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: SIR ಆತಂಕವೇ: ಜೂನ್ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ದೇವನೂರು ಚಂದ್ರು, ‘ಗ್ರಾಮಾಯಣ’ ಒಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಪ್ರೇಕ್ಷಕರು ಬಯಸುವ ಪ್ರೀತಿ, ಭಾವನೆ, ಮನರಂಜನೆ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ವಿನಯ್ ರಾಜ್‌ಕುಮಾರ್ ಈವರೆಗೂ ಕಾಣಿಸದ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ಚಿತ್ರದಲ್ಲಿ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣಾ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಅಭಿನಯಿಸಿದೆ. ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಂಡಿದ್ದು, ಅವರು ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇದನ್ನೂ ಓದಿ: ಸೂಪಾ ಜಲಾಶಯ ಖಾಲಿ ಖಾಲಿ: ವಿದ್ಯುತ್ ಉತ್ಪಾದನೆ ಮೇಲೆ ಕರಿನೆರಳು
ನಾಯಕ ವಿನಯ್ ರಾಜ್‌ಕುಮಾರ್ ಮಾತನಾಡಿ, ‘ಕಲಾವಿದರ ಸಂಘದ ಆವರಣದಲ್ಲಿ ಅಪ್ಪ, ದೊಡ್ಡಪ್ಪ ಹಾಗೂ ಚಿಕ್ಕಪ್ಪ ಅವರಿಂದ ಚಿತ್ರದ ಮುಹೂರ್ತ ನೆರವೇರಿತ್ತು. ಈಗ ಇದೇ ಸ್ಥಳದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿರುವುದು ವಿಶೇಷ ಸಂತಸ ತಂದಿದೆ. ಇದು ನಾನು ನಾಯಕನಾಗಿ ನಟಿಸಿರುವ ಒಂಭತ್ತನೇ ಚಿತ್ರ’ ಎಂದು ಹೇಳಿದರು.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ ಮತ್ತು ಭಕ್ತಿಯಂತಹ ಹಲವು ಅಂಶಗಳನ್ನು ಒಳಗೊಂಡಿರುವ ಕಥಾಹಂದರ ಸಿನಿರಸಿಕರ ಗಮನ ಸೆಳೆದಿದೆ.
ಇದನ್ನೂ ಓದಿ: ಭೂಕುಸಿತದಲ್ಲಿ ಸಿಲುಕಿ ಪಾರಾದ ಬೈಕ್ ಸವಾರ: Video ವೈರಲ್
ಚಿತ್ರದ ಮತ್ತೊಂದು ವಿಶೇಷವೆಂದರೆ, ನಟಿ ಅಪರ್ಣಾ ವಸ್ತಾರೆ ಅಭಿನಯಿಸಿರುವ ಕೊನೆಯ ಚಿತ್ರ ಇದಾಗಿರುವುದು. ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಬಹುಕಾಲದಿಂದ ಬಿಡುಗಡೆಗಾಗಿ ಕಾಯುತ್ತಿದ್ದ ‘ಗ್ರಾಮಾಯಣ’ ಚಿತ್ರವು ಕೊನೆಗೂ ಜುಲೈ 3ರಂದು ಪ್ರೇಕ್ಷಕರ ಮುಂದೆ ಬರುತ್ತಿದ್ದು, ಗ್ರಾಮೀಣ ಕಥಾಹಂದರದೊಂದಿಗೆ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸದಲ್ಲಿ ಚಿತ್ರತಂಡ ಇದೆ.






















