SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಮಾಜದ ಭಿನ್ನಾಭಿಪ್ರಾಯ ಸಹಜ: ರೈತರ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಬೇಡ – ನಿರಾಣಿ

ಸಮಾಜದ ಭಿನ್ನಾಭಿಪ್ರಾಯ ಸಹಜ: ರೈತರ ಒಪ್ಪಿಗೆಯಿಲ್ಲದೆ ಭೂಸ್ವಾಧೀನ ಬೇಡ – ನಿರಾಣಿ

0
65

ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಲೆಕ್ಕಪತ್ರ ಮಂಡನೆ ವಿಚಾರವಾಗಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳು ಶೀಘ್ರದಲ್ಲೇ ಬಗೆಹರಿಯಲಿದ್ದು, ಸಮಾಜದ ಹಿರಿಯರು ಮತ್ತು ಮುಖಂಡರು ಒಟ್ಟಾಗಿ ಪರಿಸ್ಥಿತಿಯನ್ನು ಸರಿಪಡಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಸಮಾಜದ ಮುಖಂಡ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ರಾಜಕೀಯೇತರವಾಗಿ ಅನೇಕ ಹಿರಿಯರು ಇದ್ದು, ಸೂಕ್ತ ಸಮಯದಲ್ಲಿ ಅವರು ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು. “ಯಾವುದೇ ವಿಷಯ ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ಹಂತದಲ್ಲಿರುವಾಗ ಅದರಲ್ಲಿ ಮಧ್ಯಪ್ರವೇಶಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸದ್ಯ ಪರಿಸ್ಥಿತಿ ತಣ್ಣಗಾಗಲು ಅವಕಾಶ ನೀಡಿದ್ದೇವೆ,” ಎಂದು ತಿಳಿಸಿದರು.

ಇದನ್ನೂ ಓದಿ: ಮಡಿಕೇರಿ: ಆಟವಾಡುವ ವೇಳೆ LED ಬಲ್ಬ್ ನುಂಗಿದ 8 ತಿಂಗಳ ಮಗು

“ಸ್ವಾಮೀಜಿಯವರೂ ನಮ್ಮವರೇ, ಟ್ರಸ್ಟ್‌ನಲ್ಲಿರುವವರೂ ನಮ್ಮವರೇ. ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜ ಒಂದೇ ಕುಟುಂಬದಂತಿದೆ. ಒಂದೇ ಕುಟುಂಬದಲ್ಲಿಯೂ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಹಾಗೆಯೇ ಇಷ್ಟು ದೊಡ್ಡ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡುವುದು ಅಸಹಜವೇನಲ್ಲ. ಹಿರಿಯರು ಹಾಗೂ ಮುಖಂಡರು ಶೀಘ್ರದಲ್ಲೇ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ,” ಎಂದು ನಿರಾಣಿ ಹೇಳಿದರು.

ರೈತರ ಒಪ್ಪಿಗೆ ಇಲ್ಲದೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಸಲ್ಲ: ಇದೇ ವೇಳೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾಧೀನ ಕುರಿತು ಪ್ರತಿಕ್ರಿಯಿಸಿದ ಅವರು, ರೈತರ ಒಪ್ಪಿಗೆ ಇಲ್ಲದೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಸ್ಪಷ್ಟಪಡಿಸಿದರು. “ಯಾವುದೇ ಯೋಜನೆಗೆ ಶೇ.75 ರಿಂದ 80ರಷ್ಟು ಭೂಮಾಲೀಕರ ಒಪ್ಪಿಗೆ ಇರಬೇಕು. ಬಹುತೇಕ ರೈತರು ವಿರೋಧ ವ್ಯಕ್ತಪಡಿಸಿದರೆ, ಅಂತಹ ಯೋಜನೆಯನ್ನು ಕೈಬಿಡುವುದೇ ಸೂಕ್ತ,” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸ್ಥಳೀಯ ರೈತರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಭೂಮಾಲೀಕರೊಂದಿಗೆ ಮುಕ್ತ ಚರ್ಚೆ ನಡೆಸಿ, ಸೂಕ್ತ ಪರಿಹಾರ, ಉದ್ಯೋಗ ಹಾಗೂ ಮೂಲಸೌಕರ್ಯಗಳ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಸಲಹೆ ನೀಡಿದ ಅವರು, ಅಭಿವೃದ್ಧಿ ಅಗತ್ಯವಾದರೂ ಅದು ರೈತರಿಗೆ ಅನ್ಯಾಯವಾಗದಂತೆ ಜಾರಿಯಾಗಬೇಕು ಎಂದು ಹೇಳಿದರು.