ದಾವಣಗೆರೆ: ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಸುಮಾರು ₹4.20 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಜೂನ್ 20ರಂದು ನಗರದ ಎಸ್.ಎಸ್. ಲೇಔಟ್ ಎ ಬ್ಲಾಕ್‌ನ ಆಶಾಕಿರಣ ಟ್ರಸ್ಟ್ ಸಮೀಪ ವಾಸವಿದ್ದ ಸುಮಾ ಅವರು ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಾತನಾಡಿಸುವ ನೆಪದಲ್ಲಿ ಅವರ ಬಳಿಗೆ ಬಂದಿದ್ದ. ಬಳಿಕ ಹಿಂಬದಿಯಿಂದ ಬಂದು ಅವರ ಕುತ್ತಿಗೆಯಲ್ಲಿದ್ದ ಎರಡು ಎಳೆಯ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದನು. ಈ ಸಂಬಂಧ ಸುಮಾ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಮಡಿಕೇರಿ: ಆಟವಾಡುವ ವೇಳೆ LED ಬಲ್ಬ್ ನುಂಗಿದ 8 ತಿಂಗಳ ಮಗು
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ದಾವಣಗೆರೆ ನಗರ ಉಪವಿಭಾಗದ ಡಿಎಸ್ಪಿ ಶರಣ ಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ನಿರೀಕ್ಷಕಿ ವೈ.ಎಸ್. ಶಿಲ್ಪಾ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ಕೈಗೊಂಡಿತು.
ತನಿಖೆ ವೇಳೆ ಪ್ರದೀಪ್ ಅಲಿಯಾಸ್ ಪ್ರದೀಪಾಚಾರಿ (38) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ 30.440 ಗ್ರಾಂ ತೂಕದ, ಸುಮಾರು ₹4.20 ಲಕ್ಷ ಮೌಲ್ಯದ ಎರಡು ಎಳೆಯ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ನಿರೀಕ್ಷಕಿ ವೈ.ಎಸ್. ಶಿಲ್ಪಾ ಹಾಗೂ ಸಿಬ್ಬಂದಿಗಳಾದ ಮಲ್ಲೇಶ್, ಮಾಲತೇಶ್, ಬಸವರಾಜ, ಕೊಟ್ರೇಶ್, ಚಂದ್ರಪ್ಪ ಮತ್ತು ಕವಿತಾ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ. ಶೇಖರ್ ಶ್ಲಾಘಿಸಿದ್ದಾರೆ.



















