ಅಹಮದಾಬಾದ್: ಅದಾನಿ ಸಮೂಹವು ಇಂಧನ, ವಿದ್ಯುತ್, ಅನಿಲ, ಜಲವಿದ್ಯುತ್ ಹಾಗೂ ಬಂದರು ಕ್ಷೇತ್ರಗಳಲ್ಲಿ ಭಾರೀ ವಿಸ್ತರಣೆಯತ್ತ ಹೆಜ್ಜೆ ಇಟ್ಟಿದ್ದು, ಮುಂದಿನ ವರ್ಷಗಳಲ್ಲಿ ದೇಶದ ಇಂಧನ ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಗುರಿಯನ್ನು ಹೊಂದಿದೆ ಎಂದು ಸಮೂಹದ ಅಧ್ಯಕ್ಷ ಗೌತಮ್ ಅದಾನಿ ತಿಳಿಸಿದ್ದಾರೆ.
2026ರ ವಾರ್ಷಿಕ ಸಾಮಾನ್ಯ ಸಭೆ (AGM) ಉದ್ದೇಶಿಸಿ ಮಾತನಾಡಿದ ಅವರು, ಅದಾನಿ ಎನರ್ಜಿ ಸೊಲ್ಯೂಷನ್ಸ್ ಸಂಸ್ಥೆಯ ಪ್ರಸರಣ ಆರ್ಡರ್ ಬುಕ್ ಈಗ ₹72,000 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು. ಖಾವ್ಡಾ-ಸೌತ್ ಓಲ್ಪಾಡ್ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ (HVDC) ಲೈನ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಸಂಸ್ಥೆ ಪಡೆದಿದ್ದು, HVDC ತಂತ್ರಜ್ಞಾನದಲ್ಲಿ ಸಾಬೀತಾಗಿರುವ ಸಾಮರ್ಥ್ಯ ಹೊಂದಿರುವ ಭಾರತದ ಏಕೈಕ ಖಾಸಗಿ ಕಂಪನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ
ಇದೇ ವೇಳೆ, ಅದಾನಿ ಪವರ್ ಮೂಲಕ ದೇಶದ ಅತಿದೊಡ್ಡ ಖಾಸಗಿ ವಿದ್ಯುತ್ ಬಂಡವಾಳ ಹೂಡಿಕೆ (ಕ್ಯಾಪೆಕ್ಸ್) ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಗೌತಮ್ ಅದಾನಿ ತಿಳಿಸಿದರು. ₹2 ಲಕ್ಷ ಕೋಟಿಗೂ ಅಧಿಕ ಮೊತ್ತದ ಈ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 45 ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಂಸ್ಥೆ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದ್ದು, ಭೂತಾನ್ ಸರ್ಕಾರದ ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್ (DGPC) ಜತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಅವರು ಘೋಷಿಸಿದರು. ಈ ಒಪ್ಪಂದದಡಿ ಅದಾನಿ ಗ್ರೂಪ್ ಹಾಗೂ ಡಿಜಿಪಿಸಿ ಜಂಟಿಯಾಗಿ ಭೂತಾನ್‌ನಲ್ಲಿ 5,000 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಲಿವೆ.
ಇದನ್ನೂ ಓದಿ: ಅಗ್ನಿ ಅವಘಡ: ಉದ್ಯೋಗ ಭವನ ಬಳಿ 200ಕ್ಕೂ ಅಧಿಕ ಶೆಡ್‌ಗಳು ಭಸ್ಮ!
ಇದಲ್ಲದೆ, “ಅದಾನಿ ನ್ಯೂಕ್ಲಿಯರ್ ಎನರ್ಜಿ” ಮೂಲಕ ಪರಮಾಣು ಇಂಧನ ಕ್ಷೇತ್ರಕ್ಕೆ ಪ್ರವೇಶಿಸಿರುವುದು ಭಾರತದ ದೀರ್ಘಕಾಲೀನ ಇಂಧನ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 2035ರ ವೇಳೆಗೆ 10 ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸುವ ಗುರಿ ಹೊಂದಿದ್ದು, 24×7 ಶುದ್ಧ ಇಂಧನದ ಬೇಡಿಕೆಯನ್ನು ಪೂರೈಸಲು ಸಂಸ್ಥೆ ಈಗಾಗಲೇ ಸಿದ್ಧತೆ ಆರಂಭಿಸಿದೆ ಎಂದು ಹೇಳಿದರು.
ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಯು ದೇಶಾದ್ಯಂತ 11 ಲಕ್ಷಕ್ಕೂ ಅಧಿಕ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಗೃಹ ಸಂಪರ್ಕಗಳನ್ನು ಒದಗಿಸಿರುವುದಾಗಿ ತಿಳಿಸಿದ ಅವರು, ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಸುಲಭವಾಗಿ ಲಭ್ಯವಾಗುವ ನೈಸರ್ಗಿಕ ಅನಿಲದ ಬೇಡಿಕೆ ಹೆಚ್ಚುತ್ತಿರುವುದರಿಂದ PNG ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದರು.
ಇದನ್ನೂ ಓದಿ: ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!
ಲಾಜಿಸ್ಟಿಕ್ಸ್ ಹಾಗೂ ಬಂದರು ಕ್ಷೇತ್ರದ ಕುರಿತು ಮಾತನಾಡಿದ ಅವರು, 2025-26ನೇ ಹಣಕಾಸು ವರ್ಷದಲ್ಲಿ ಅದಾನಿ ಪೋರ್ಟ್‌ಗಳು 500 ಮಿಲಿಯನ್ ಟನ್‌ಗಿಂತ ಅಧಿಕ ಸರಕು ನಿರ್ವಹಣೆ ಮಾಡುವ ನಿರೀಕ್ಷೆಯಿದ್ದು, 2030ರ ವೇಳೆಗೆ 1 ಬಿಲಿಯನ್ ಟನ್ ಸರಕು ನಿರ್ವಹಣೆ ಸಾಧಿಸುವ ಸ್ಪಷ್ಟ ಗುರಿ ಹೊಂದಿದೆ ಎಂದು ಹೇಳಿದರು.
ಅದಾನಿ ಗ್ರೂಪ್‌ನ ಈ ಮಹತ್ವಾಕಾಂಕ್ಷಿ ಯೋಜನೆಗಳು ಭಾರತದ ಇಂಧನ, ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳ ಭವಿಷ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಮೂಡಿಸಿದೆ.



















