SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಹೋಗುವವರಿಗೆ ಎಚ್ಚರಿಕೆ: ಆರೆಂಜ್ ಅಲರ್ಟ್ ಘೋಷಣೆ

ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಹೋಗುವವರಿಗೆ ಎಚ್ಚರಿಕೆ: ಆರೆಂಜ್ ಅಲರ್ಟ್ ಘೋಷಣೆ

0
48

ಕಾರವಾರ: ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಮಂಗಳವಾರ ಬಿಟ್ಟು ಬಿಟ್ಟು ಜೋರು ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಮಳೆ ಇಲ್ಲದೇ ತೀವ್ರ ಬಿಸಿಲಿನ ವಾತಾವರಣ ಕಂಡುಬರುತ್ತಿದ್ದ ಕಾರಣ ಜನ ಕಂಗಾಲಾಗಿದ್ದರು. ಮುಂಗಾರು ಆರಂಭವಾಗಿದ್ದರೂ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಮಳೆಗಾಗಿ ಮುಗಿಲು ನೋಡುವಂತಾಗಿತ್ತು.

ಆದರೆ ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮೋಡಕವಿದ ವಾತಾವರಣ ಮುಂದುವರಿದಿದೆ. ಕಾರವಾರದಲ್ಲಿ ಸೋಮವಾರ ಮುಂಜಾನೆ ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದ್ದು, ಬಳಿಕ ಬಿಡುವು ನೀಡಿದ್ದ ಮಳೆ ಪುನಃ ಪ್ರಾರಂಭವಾಗಿ ಸಂಜೆ ವೇಳೆಗೆ ಮತ್ತಷ್ಟು ಚುರುಕುಗೊಂಡಿದೆ. ಕರಾವಳಿಯ ಇತರೆ ತಾಲೂಕುಗಳು ಹಾಗೂ ಮಲೆನಾಡಿನಲ್ಲಿಯೂ ಇದೇ ವಾತಾವರಣ ಮುಂದುವರಿದಿದೆ.

ಭಟ್ಕಳ-ಕಾರವಾರದಲ್ಲಿ ಗರಿಷ್ಠ ಮಳೆ ದಾಖಲು: ಹವಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಭಟ್ಕಳದ ಕೈಕಿನಿಯಲ್ಲಿ 130.5 ಮಿ.ಮೀ, ಕಾರವಾರದ ಮೂಡಗೇರಿ 128.5 ಮಿ.ಮೀ, ವೈಲವಾಡ 118.5 ಮಿ.ಮೀ, ಅಸ್ನೋಟಿ 107.5 ಮಿ.ಮೀ ಹಾಗೂ ಕುಮಟಾದ ವಾಲ್ಗಳ್ಳಿಯಲ್ಲಿ 102.0 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಅಂಕೋಲಾ, ಹೊನ್ನಾವರ ಸೇರಿದಂತೆ ಬಹುತೇಕ ಕಡೆ 60 ಮಿ.ಮೀ ಗಿಂತಲೂ ಹೆಚ್ಚಿನ ಉತ್ತಮ ಮಳೆಯಾಗಿದೆ.

ಜೂನ್ 27 ರವರೆಗೆ ಆರೆಂಜ್ ಅಲರ್ಟ್: ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಜೂನ್ 23 ರಿಂದ ಜೂನ್ 26 ರವರೆಗೆ ಗುಡುಗು, ಮಿಂಚು ಹಾಗೂ ಗಂಟೆಗೆ 30-40 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 27 ರವರೆಗೂ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಲು ಕೋರಲಾಗಿದೆ.