ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ಪರ-ವಿರೋಧದ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ವಿಚಾರ ಇದೀಗ ರಾಜಕೀಯ ಜಿದ್ದಾಜಿದ್ದಿಯ ಅಖಾಡವಾಗುತ್ತಿದೆ. ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಸೋಮವಾರ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಡಿ.ಕೆ. ಶಿವಕುಮಾರ್, “ತಾವು ಹಿಂದೆ ಪ್ರಾರಂಭಿಸಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಸಮಗ್ರ ಚರ್ಚೆ ನಡೆಸಲು ನಾನು ಉತ್ಸುಕನಾಗಿದ್ದೇನೆ. ಜೂನ್ 26ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ತಾವು ಹಾಗೂ ತಮ್ಮ ತಂಡದ ಐವರು ಪ್ರತಿನಿಧಿಗಳೊಂದಿಗೆ ಆಗಮಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಜೂನ್ 26ರಂದು ಪೂರ್ವನಿಯೋಜಿತ ಕಾರ್ಯಕ್ರಮಗಳಿರುವುದರಿಂದ ವಿಧಾನಸೌಧಕ್ಕೆ ಬರುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ, “ಜೂನ್ 27ರಂದು ಬಿಡದಿ ವ್ಯಾಪ್ತಿಯ ಭೈರಮಂಗಲದಲ್ಲೇ ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚೆ ನಡೆಸೋಣ” ಎಂದು ಪ್ರತಿಸವಾಲು ಹಾಕಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆ ಆರಂಭದಿಂದಲೇ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಈಗ ಡಿಕೆಶಿ ಮತ್ತು ಕುಮಾರಸ್ವಾಮಿ ನಡುವಿನ ನೇರ ಮುಖಾಮುಖಿ ಚರ್ಚೆಯ ಸಾಧ್ಯತೆ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
ಇಬ್ಬರು ನಾಯಕರ ಸವಾಲು-ಪ್ರತಿಸವಾಲುಗಳಿಂದಾಗಿ ಈ ವಿಚಾರ ಮತ್ತಷ್ಟು ಕಾವೇರಿದ್ದು, ಜೂನ್ 27ರಂದು ಏನಾಗಲಿದೆ ಎಂಬುದರತ್ತ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.






















