ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಂದ ಅಡ್ಡಮತದಾನ ನಡೆದಿರುವ ಆರೋಪದ ಸತ್ಯಶೋಧನೆ ಚುರುಕುಗೊಂಡಿದ್ದು, ಎರಡು ದಿನಗಳಲ್ಲಿ ಪಕ್ಷದ ವರಿಷ್ಠರಿಗೆ ಮಧ್ಯಂತರ ವರದಿ ಸಲ್ಲಿಸಲಾಗುವುದು ಎಂದು ತನಿಖಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಬಿಜೆಪಿ ಮತ್ತು ಜೆಡಿಎಸ್‌ಗೆ ಲಭ್ಯವಿದ್ದ ಮತಗಳು ಹಾಗೂ ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳ ನಡುವೆ ಒಟ್ಟು 12 ಮತಗಳ ವ್ಯತ್ಯಾಸ ಕಂಡುಬಂದಿದೆ. ಯಾವ ಪಕ್ಷದಿಂದ ಎಷ್ಟು ಮತಗಳು ಕೈತಪ್ಪಿವೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ’ ಎಂದರು.
ʻಮತದಾನ ಗೌಪ್ಯವಾಗಿರುವುದರಿಂದ ನಿರ್ದಿಷ್ಟವಾಗಿ ಯಾರನ್ನೂ ಆರೋಪಿಸಲು ಸಾಧ್ಯವಿಲ್ಲ. ಯಾರ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವುದಿಲ್ಲ. ಸಾಂದರ್ಭಿಕ ಮಾಹಿತಿ ಮತ್ತು ಲಭ್ಯ ಸಾಕ್ಷ್ಯಗಳನ್ನು ಕಲೆಹಾಕಿ, ಅವಲೋಕನ ನಡೆಸಲಾಗುತ್ತಿದೆ. ಇವರೇ ಅಡ್ಡಮತದಾನ ಮಾಡಿದ್ದಾರೆ ಎಂದು ಈಗಲೇ ತೀರ್ಮಾನಕ್ಕೆ ಬರುವುದಿಲ್ಲ’. ಎಲ್ಲ ಅಂಶಗಳ ಕುರಿತು ಸತ್ಯಶೋಧನೆ ನಡೆಸಿ ಪ್ರಾಥಮಿಕ ವರದಿ ನೀಡುತ್ತೇವೆ. ವರದಿ ಆಧರಿಸಿ ಪಕ್ಷದ ಶಿಸ್ತು ಸಮಿತಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆಯೂ ಆಲೋಚಿಸಲಾಗುವುದು’ ಎಂದರು.






















