SK Home Ad
Home ನಮ್ಮ ಜಿಲ್ಲೆ ಶುಭಾಶಯ ಕೋರಿ ಕೋಟಿ ಆಸೆ ತೋರಿಸಿದರು; ನಿವೃತ್ತ ಯೋಧನಿಗೆ ಲಕ್ಷಾಂತರ ರೂಪಾಯಿ ಸೈಬರ್ ಶಾಕ್!

ಶುಭಾಶಯ ಕೋರಿ ಕೋಟಿ ಆಸೆ ತೋರಿಸಿದರು; ನಿವೃತ್ತ ಯೋಧನಿಗೆ ಲಕ್ಷಾಂತರ ರೂಪಾಯಿ ಸೈಬರ್ ಶಾಕ್!

0
23

ತುಮಕೂರು: ದೇಶ ಕಾಯ್ದು ನಿವೃತ್ತರಾದ ಯೋಧರೊಬ್ಬರು ತಮ್ಮ ಹುಟ್ಟುಹಬ್ಬದ ದಿನವೇ ಸೈಬರ್ ಖದೀಮರ ಜಾಲಕ್ಕೆ ಸಿಲುಕಿ ಬರೋಬ್ಬರಿ 2.82 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ವಂಚನೆಗೊಳಗಾದ ದುರ್ದೈವಿಯಾಗಿದ್ದಾರೆ.

ಶುಭಾಶಯ ಕೋರಿ ಸಂಚು ರೂಪಿಸಿದ ಖದೀಮರು: ಜೂನ್ 20ರಂದು ಶಿವಕುಮಾರ್ ಹುಟ್ಟುಹಬ್ಬವಿತ್ತು. ಇದೇ ದಿನ ಮುಂಜಾನೆ ಅಪರಿಚಿತ ವ್ಯಕ್ತಿಗಳು ಯೋಧನಿಗೆ ಕರೆ ಮಾಡಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಮಾತುಕತೆಯ ನಡುವೆ, “ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದ ಅಮೂಲ್ಯವಾದ ಉಡುಗೊರೆ ನೀಡುತ್ತಿದ್ದೇವೆ” ಎಂದು ನಂಬಿಸಿ, ಪಾರ್ಸೆಲ್ ಕಳುಹಿಸುವ ನೆಪದಲ್ಲಿ ಮನೆಯ ವಿಳಾಸವನ್ನು ಪಡೆದುಕೊಂಡಿದ್ದಾರೆ.

ನಂತರ ವಿಳಾಸ ಪಡೆದ ಕೆಲವೇ ಹೊತ್ತಿನಲ್ಲಿ ಮತ್ತೆ ಕರೆ ಮಾಡಿದ ವಂಚಕರು, “ನಿಮ್ಮ ಗಿಫ್ಟ್ ಸಿದ್ಧವಾಗಿದೆ. ಆದ್ರೆ ಕೊರಿಯರ್ ಮತ್ತು ಕಸ್ಟಮ್ಸ್ ಡ್ಯೂಟಿ ಚಾರ್ಜ್‌ನ್ನು ಮುಂಗಡವಾಗಿ ಪಾವತಿಸಬೇಕು. ಈ ಹಣವನ್ನು ಗಿಫ್ಟ್ ಸಿಕ್ಕ ತಕ್ಷಣ ರಿಫಂಡ್ ಮಾಡಲಾಗುವುದು” ಎಂದು ನಂಬಿಸಿ ಆನ್‌ಲೈನ್ ಲಿಂಕ್ ಕಳುಹಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಶಿವಕುಮಾರ್, ವಿವಿಧ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 2.82 ಲಕ್ಷ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ.

ಅಷ್ಟೇ ಅಲ್ಲದೇ ಹಣ ವರ್ಗಾವಣೆಯಾಗುತ್ತಿದ್ದಂತೆ ವಂಚಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಡವಾಗಿ ತಾನು ಸೈಬರ್ ಜಾಲದ ಬಲೆಗೆ ಬಿದ್ದು ವಂಚನೆಗೊಳಗಾಗಿರುವುದು ಯೋಧನಿಗೆ ಅರಿವಾಗಿದೆ. ಸದ್ಯ ಶಿವಕುಮಾರ್ ತುಮಕೂರು ಸಿಇಎನ್ (CEN) ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.