SK Home Ad
Home ಸಿನಿ ಮಿಲ್ಸ್ ʻಸು ಫ್ರಂ ಸೋ’ ರಿಲೀಸ್ ದಿನವೇ ‘ಕರಾವಳಿ’ ದರ್ಶನ

ʻಸು ಫ್ರಂ ಸೋ’ ರಿಲೀಸ್ ದಿನವೇ ‘ಕರಾವಳಿ’ ದರ್ಶನ

0
61

ಸದ್ಯದ ಮಟ್ಟಿಗೆ ಕನ್ನಡ ಸಿನಿಮಾಗಳ ಸಕ್ಸಸ್ ರೇಟ್ ತುಂಬಾ ಕಡಿಮೆ. ಹಾಗಂತ ಸಿನಿಮಾ ರಿಲೀಸ್ ಸಂಖ್ಯೆ ಏನು ಕಮ್ಮಿಯಾಗಿಲ್ಲ. ವಾರವಾರಕ್ಕೆ ಡಜನ್‌ಗಟ್ಟಲೆ ಸಿನಿಮಾಗಳು ಚಿತ್ರಮಂದಿರದ ಕದ ತಟ್ಟುತ್ತಿವೆ, ಆದರೆ ಯಾವ ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುತ್ತಿಲ್ಲ. ಕಳೆದ ವರ್ಷದ ಸ್ಥಿತಿಯೂ ಹೀಗೆ ಇತ್ತು. ಆ ಸಮಯದಲ್ಲಿ ʻಸು ಫ್ರಂ ಸೋ’ ಭರವಸೆಯ ಬೆಳಕಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ವರ್ಷ ಜುಲೈ 24ಕ್ಕೆ ರಿಲೀಸ್ ಆದ ʻಸು ಫ್ರಂ ಸೋ’ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು.

ಈ ವರ್ಷವೂ ಅಂಥದ್ದೊಂದು ಮ್ಯಾಜಿಕ್‌ಗೆ ಅದೇ ದಿನ ʻಕರಾವಳಿ’ ತಂಡ ಸಜ್ಜಾಗಿರುವುದು ವಿಶೇಷ. ʻಸು ಫ್ರಂ ಸೋ’ ರಿಲೀಸ್ ಆದ ದಿನ (ಜುಲೈ 24) ಒಂದು ವರ್ಷದ ಬಳಿಕ ಮತ್ತೊಂದು ಭರವಸೆಯ ಕರಾವಳಿ ಸಿನಿಮಾ ತೆರೆ ಕಾಣುತ್ತಿದೆ. ಗುರುದತ್ ಗಾಣಗ ನಿರ್ದೇಶನದ ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಜುಲೈ 24ಕ್ಕೆ ಅದ್ಧೂರಿಯಾಗಿ ತೆರೆ ಕಾಣಲಿದೆ.

ಈಗಾಗಲೇ ಪೋಸ್ಟರ್ ಮತ್ತು ಟೀಸರ್‌ಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕರಾವಳಿ ಕೊನೆಗೂ ತೆರೆಗೆ ಬರುತ್ತಿದೆ. ಸು ಫ್ರಂ ಸೋ ಹಾಗಯೇ ಕರಾವಳಿ ಕೂಡ ಚಿತ್ರರಂಗಕ್ಕೆ ಗೇಮ್ ಚೇಂಜರ್ ಆಗಲಿದೆ ಎನ್ನುವ ಭರವಸೆ ಮೂಡಿಸಿದೆ. ಕಳೆದ ವರ್ಷ ಜುಲೈ ತಿಂಗಳು ಕನ್ನಡ ಸಿನಿಮಾರಂಗ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿತ್ತು. ಸು ಫ್ರಂ ಸೋ, ಎಕ್ಕ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಈ ವರ್ಷದ ಜುಲೈ ಕೂಡ ಕನ್ನಡ ಸಿನಿಮಾರಂಗದ ಕಳೆ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಗುರುದತ್ ಗಾಣಿಗ, “ಇದುವರೆಗೂ ತೆರೆ ಮೇಲೆ ನೋಡಿರದ ಪ್ರಾಮಾಣಿಕ ಪ್ರಯತ್ನ. ಸು ಫ್ರಂ ಸೋ ರಿಲೀಸ್ ಆದ ದಿನವೇ ಬರ್ತಾ ಇರೋದು ಕಾಕತಾಳಿಯ. ಖಂಡಿತ ಒಂದೊಳ್ಳೆ ಸಿನಿಮಾ ಮಾಡಿದ್ದೀವಿ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಅದ್ಭುತ ಅನುಭವ ಆಗಲಿದೆ” ಎನ್ನುತ್ತಾರೆ.

ಕರಾವಳಿ ಹೆಸರೇ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ. ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಸಂಪದಾ ನಟಿಸಿದ್ದಾರೆ. ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಕರಾವಳಿ, ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಕರಾವಳಿ ಸಿನಿಮಾವನ್ನು ಪ್ರೆಸೆಂಟ್ ಮಾಡುವ ಜೊತೆಗೆ ವಿತರಣೆಯನ್ನೂ ಮಾಡುತ್ತಿರುವುದು ವಿಶೇಷ.

ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಸಚಿನ್ ಬಸ್ರೂರು ಸಂಗೀತ, ಅಭಿಮನ್ಯೂ ಸದಾನಂದನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.