ಧಾರವಾಡ: ವಿದ್ಯಾರ್ಥಿನಿಗೆ ಕಿರುಕುಳ, ವೇದವ್ಯಾಸ ಎಂಬ ಪಿಎಚ್‌ಡಿ ವಿದ್ಯಾರ್ಥಿಗೆ ಹಿಂಸೆ ನೀಡಿದ ಆರೋಪದ ಹಿನ್ನೆಲೆ ಕವಿವಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅವರನ್ನು ಅಮಾನತು ಮಾಡಿ ಕವಿವಿ ಕುಲಸಚಿವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಪ್ರಾಧ್ಯಾಪಕರು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿರುವುದು, ಪಿಎಚ್‌ಡಿ ವಿದ್ಯಾರ್ಥಿಗೆ ಹಿಂಸೆ ನೀಡುತ್ತಿರುವ ಬಗ್ಗೆ ದೂರು ಕುಲಪತಿಗಳಿಗೆ ಸಲ್ಲಿಕೆಯಾಗಿದ್ದವು. ವಿದ್ಯಾರ್ಥಿನಿಗೆ ತನನ್ನು ಮದುವೆ ಆಗಬೇಕು ಎಂದು ಒತ್ತಾಯಿಸುವುದು, ಆ ವಿದ್ಯಾರ್ಥಿನಿಯನ್ನು ಕರೆ ತಂದರಷ್ಟೇ ನಿನ್ನ ಪಿಎಚ್‌ಡಿ ಮಂಡನೆಗೆ ಸಹಕಾರ ನೀಡುತ್ತೇನೆ ಎಂದು ವೇದವ್ಯಾಸ ಎಂಬ ವಿದ್ಯಾರ್ಥಿಗೆ ಕಿರುಕುಳ ನೀಡಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಕುಲ ಸಚಿವರು ಸಮಿತಿ ರಚನೆ ಮಾಡಿದ್ದರು. ಅಲ್ಲದೇ ಪ್ರಾಧ್ಯಾಪಕನ ಅಮಾನತ್ ಮಾಡಬೇಕು, ಕಾನೂನು ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿ ಸಂಘಟನೆ ಸೇರಿ ಸಾರ್ವಜನಿಕ ಸಂಘಟನೆ ಪ್ರತಿಭಟನೆ ನಡೆಸಿದ್ದವು.
ಬುಧವಾರವೂ ಸಹ ಸಂಘಟನೆಗಳು ಕವಿವಿ ಕುಲಪತಿಗಳ ಕಚೇರಿ ಎದುರು ಪ್ರತಿಭಟನೆ ತೀವ್ರಗೊಳಿಸಿದ ವೇಳೆಯೇ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತು ಆದೇಶವನ್ನು ಕುಲಸಚಿವರು ಹೊರಡಿಸಿದ್ದಾರೆ.
ವಿಚಾರಣೆ ಮುಗಿಯುವವರೆಗೂ ಧಾರವಾಡ ಬಿಟ್ಟು ಹೋಗುವಂತಿಲ್ಲ ಎಂದು ಆದೇಶದಲ್ಲಿ ಕುಲಸಚಿವರು ಉಲ್ಲೇಖಿಸಿದ್ದಾರೆ. ಈ ಪ್ರಾಧ್ಯಾಪಕ ಕಿರುಕುಳ ನೀಡುತ್ತಿರುವ ಬಗ್ಗೆ ಮೊದಲು ವರದಿ ಪ್ರಕಟಿಸಿದ್ದೇ ಸಂಯುಕ್ತ ಕರ್ನಾಟಕ.






















