SK Home Ad
Home ನಮ್ಮ ಜಿಲ್ಲೆ ದಾವಣಗೆರೆ 8ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟ: ಓರ್ವ ವ್ಯಕ್ತಿಗೆ ಗಂಭೀರ ಗಾಯ

8ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟ: ಓರ್ವ ವ್ಯಕ್ತಿಗೆ ಗಂಭೀರ ಗಾಯ

0
90

ದಾವಣಗೆರೆ: ತಾಲೂಕಿನ ಎಚ್. ಕಲ್ಪನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿರುವ ಸಿಲಿಂಡರ್ ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಗೋದಾಮಿನಲ್ಲಿದ್ದ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಭೀಕರವಾಗಿ ಸ್ಫೋಟಗೊಂಡಿವೆ.

ದೊಗ್ಗಳ್ಳಿ ಶಿವಕುಮಾರ್ ಅವರಿಗೆ ಸೇರಿದ ಈ ಅಡಿಕೆ ಸಂಸ್ಕರಣಾ ಗೋದಾಮನ್ನು ಖಾಲಿ ಇದ್ದ ಕಾರಣಕ್ಕೆ, ಅನಿಲ್ ಎಂಬುವವರಿಗೆ ಸಿಲಿಂಡರ್ ಸಂಗ್ರಹಿಸಿಡಲು ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ. ಘಟನೆಯಲ್ಲಿ ಅನಿಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗೋದಾಮಿನಲ್ಲಿದ್ದ 20 ರಿಂದ 25 ಸಿಲಿಂಡರ್‌ಗಳ ಪೈಕಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಸಿಲಿಂಡರ್‌ಗಳು 100ರಿಂದ 200 ಮೀಟರ್ ದೂರದವರೆಗೂ ಹಾರಿ ಬಿದ್ದಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರೋ ಧೂಮಪಾನ (ಸಿಗರೇಟ್) ಮಾಡುತ್ತಿದ್ದಾಗ ಕಿಡಿ ತಗುಲಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಯಾವುದೇ ಮುಂಜಾಗ್ರತಾ ಅಥವಾ ಸುರಕ್ಷತಾ ಕ್ರಮಗಳಿಲ್ಲದೆ ಕಾನೂನುಬಾಹಿರವಾಗಿ ಇಲ್ಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಹಾಗೂ ಉಳಿದ ಸಿಲಿಂಡರ್‌ಗಳು ಸ್ಫೋಟಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಅದೃಷ್ಟವಶಾತ್ ಸುತ್ತಮುತ್ತ ಯಾವುದೇ ಜನವಸತಿ ಇಲ್ಲದ ಕಾರಣ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.

ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ. ಶೇಖರ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.