SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾರವಾರ-ಮಡಗಾಂವ್ ವಿಶೇಷ ರೈಲು ಇನ್ನು ಖಾಯಂ ಸೇವೆ

ಕಾರವಾರ-ಮಡಗಾಂವ್ ವಿಶೇಷ ರೈಲು ಇನ್ನು ಖಾಯಂ ಸೇವೆ

0
72

ಪ್ರವಾಸೋದ್ಯಮ ಮತ್ತು ಉದ್ಯೋಗಿಗಳಿಗೆ ಅನುಕೂಲ; ಕಾರವಾರ-ಮಡಗಾಂವ್ ರೈಲುಗೆ ಶಾಶ್ವತ ಮಾನ್ಯತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆ ಹಾಗೂ ಗೋವಾ ರಾಜ್ಯದ ನಡುವೆ ಪ್ರತಿದಿನ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಸಂತಸದ ಸುದ್ದಿ ದೊರೆತಿದೆ. ಕಾರವಾರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ರೈಲು ಸೇವೆಯನ್ನು ಭಾರತೀಯ ರೈಲ್ವೆ ಮಂಡಳಿ ಇನ್ನುಮುಂದೆ ಖಾಯಂ ರೈಲು ಸೇವೆಯಾಗಿ ಪರಿವರ್ತಿಸಿ ಅಧಿಕೃತ ಆದೇಶ ಹೊರಡಿಸಿದೆ.

ಬಹುಕಾಲದಿಂದ ಈ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ಈ ರೈಲನ್ನು ಶಾಶ್ವತಗೊಳಿಸುವಂತೆ ಆಗ್ರಹಿಸುತ್ತಿದ್ದರು. ಈಗ ಆ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಮಂಡಳಿ, ವಿಶೇಷ ರೈಲು ಸೇವೆಯನ್ನು ನಿಯಮಿತ ಎಕ್ಸ್‌ಪ್ರೆಸ್ ರೈಲಾಗಿ ಪರಿವರ್ತಿಸಿದೆ.

ಈ ಹಿಂದೆ 01595/01596 ಸಂಖ್ಯೆಯ ವಿಶೇಷ ರೈಲಾಗಿ ಕಾರ್ಯನಿರ್ವಹಿಸುತ್ತಿದ್ದ ಸೇವೆಯನ್ನು ಇನ್ನು ಮುಂದೆ 10109/10110 ಮಡಗಾಂವ್–ಕಾರವಾರ–ಮಡಗಾಂವ್ ಎಕ್ಸ್‌ಪ್ರೆಸ್ ರೈಲಾಗಿ ಪ್ರತಿದಿನ ಓಡಿಸಲಾಗುತ್ತದೆ. ಈ ಕ್ರಮದಿಂದ ರೈಲು ಸೇವೆಯ ನಿರಂತರತೆ ಖಾತ್ರಿಯಾಗುವುದರ ಜೊತೆಗೆ ಪ್ರಯಾಣಿಕರಲ್ಲಿ ಉಂಟಾಗಿದ್ದ ಅನಿಶ್ಚಿತತೆಯೂ ನಿವಾರಣೆಯಾಗಲಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ : ಕಾರವಾರ ಮತ್ತು ಮಡಗಾಂವ್ ನಡುವೆ ಪ್ರತಿದಿನ ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ಉದ್ದೇಶಗಳಿಗಾಗಿ ಸಾವಿರಾರು ಜನರು ಸಂಚರಿಸುತ್ತಾರೆ. ವಿಶೇಷವಾಗಿ ಗಡಿ ಭಾಗದ ಜನರಿಗೆ ಈ ರೈಲು ಅತ್ಯಂತ ಅನುಕೂಲಕರ ಸಾರಿಗೆ ವ್ಯವಸ್ಥೆಯಾಗಿದೆ.

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಈ ರೈಲು ಪ್ರತಿದಿನ ಸಂಚರಿಸಲಿದ್ದು, ಮಧ್ಯದಲ್ಲಿ ಕಾಣಕೋಣ ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆ ಹೊಂದಿರಲಿದೆ. ಇದರಿಂದ ಗೋವಾದ ದಕ್ಷಿಣ ಭಾಗದ ಪ್ರಯಾಣಿಕರಿಗೂ ಹೆಚ್ಚಿನ ಪ್ರಯೋಜನವಾಗಲಿದೆ.

ರೈಲು ವೇಳಾಪಟ್ಟಿ : ರೈಲು ಸಂಖ್ಯೆ 10110 – ಕಾರವಾರ-ಮಡಗಾಂವ್ ಎಕ್ಸ್‌ಪ್ರೆಸ್, ಕಾರವಾರದಿಂದ ಬೆಳಗ್ಗೆ 8:30 ಗಂಟೆಗೆ ಹೊರಡಲಿದೆ. ಹಾಗೂ ಮಡಗಾಂವ್‌ಗೆ ಅದೇ ದಿನ ಬೆಳಗ್ಗೆ 9:45 ಗಂಟೆಗೆ ತಲುಪಲಿದೆ. ರೈಲಿನ ಹಿಂತಿರುಗುವ ಸೇವೆಯ ವೇಳಾಪಟ್ಟಿಯನ್ನು ಸಹ ರೈಲ್ವೆ ಇಲಾಖೆ ಪ್ರಕಟಿಸಿದ್ದು, ಪ್ರತಿದಿನದ ಸಂಚಾರದಿಂದ ಎರಡು ನಗರಗಳ ನಡುವಿನ ಸಂಪರ್ಕ ಮತ್ತಷ್ಟು ಬಲವಾಗಲಿದೆ.

ರೈಲು ಸಂಖ್ಯೆ 10109 (ಮಡಗಾಂವ್ ಕಾರವಾರ ಎಕ್ಸ್‌ಪ್ರೆಸ್): ಪ್ರತಿದಿನ ಸಂಜೆ 04:30 ಕ್ಕೆ ಮಡಗಾಂವ್‌ನಿಂದ ಹೊರಟು, ಸಂಜೆ 05:45 ಕ್ಕೆ ಕಾರವಾರವನ್ನು ತಲುಪಲಿದೆ.

ಆರ್ಥಿಕ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ : ಕಾರವಾರ ಹಾಗೂ ಗೋವಾ ನಡುವಿನ ಸಂಪರ್ಕ ಬಲಗೊಳ್ಳುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಕಾರವಾರದ ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ರೈಲು ಅನುಕೂಲವಾಗಲಿದೆ. ಅದೇ ರೀತಿ ಗೋವಾಕ್ಕೆ ತೆರಳುವ ಸ್ಥಳೀಯ ಪ್ರಯಾಣಿಕರಿಗೂ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಪ್ರಯಾಣದ ಅವಕಾಶ ದೊರೆಯಲಿದೆ.

ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರು ರೈಲು ಸೇವೆಯನ್ನು ಖಾಯಂಗೊಳಿಸಿರುವ ರೈಲ್ವೆ ಮಂಡಳಿ ಹಾಗೂ ಈ ಕುರಿತು ಸತತವಾಗಿ ಪ್ರಯತ್ನಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.