SK Home Ad
Home ನಮ್ಮ ಜಿಲ್ಲೆ U19 ಏಷ್ಯಾ ಕಪ್ ಫೈನಲ್ ರೋಚಕ ಘಟ್ಟಕ್ಕೆ: ಪಾಕಿಸ್ತಾನದ 338 ರನ್ ಗುರಿ ಬೆನ್ನಟ್ಟುತ್ತಿರುವ ಭಾರತಕ್ಕೆ...

U19 ಏಷ್ಯಾ ಕಪ್ ಫೈನಲ್ ರೋಚಕ ಘಟ್ಟಕ್ಕೆ: ಪಾಕಿಸ್ತಾನದ 338 ರನ್ ಗುರಿ ಬೆನ್ನಟ್ಟುತ್ತಿರುವ ಭಾರತಕ್ಕೆ ಆರ್ಯವೀರ್ ಸೆಹ್ವಾಗ್, ಲಕ್ಷ್ಯ ಆಸರೆ

0
12

ಒಮನ್‌ನ ಅಲ್ ಅಮ್ರತ್ ಮೈದಾನದಲ್ಲಿ ಶನಿವಾರ ನಡೆಯುತ್ತಿರುವ ಅಂಡರ್-19 ಏಷ್ಯಾ ಕಪ್ 2026ರ ಪ್ರಶಸ್ತಿ ಸುತ್ತಿನ ಮಹಾಕದನ ರೋಚಕ ಹಂತ ತಲುಪಿದೆ. ಬದ್ಧವೈರಿ ಪಾಕಿಸ್ತಾನ ನೀಡಿರುವ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿರುವ ಭಾರತ ಅಂಡರ್-19 ತಂಡ, 28.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಹೋರಾಟ ಮುಂದುವರಿಸಿದೆ.

ಗೆಲುವಿಗೆ ಇನ್ನೂ 128 ಎಸೆತಗಳಲ್ಲಿ 187 ರನ್‌ಗಳ ಅಗತ್ಯವಿದ್ದು, ಅಗತ್ಯ ರನ್‌ರೇಟ್ 8.77ಕ್ಕೆ ಏರಿಕೆಯಾಗಿರುವುದು ಭಾರತದ ಮೇಲೆ ಒತ್ತಡ ಹೆಚ್ಚಿಸಿದೆ. ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರಾಯ್‌ಚಂದಾನಿ ಮೊದಲ ವಿಕೆಟ್‌ಗೆ 95 ರನ್‌ಗಳ ಉತ್ತಮ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು.

ಆಕ್ರಮಣಕಾರಿ ಆಟವಾಡಿದ ಆರ್ಯವೀರ್ ಸೆಹ್ವಾಗ್ 61 ಎಸೆತಗಳಲ್ಲಿ 9 ಬೌಂಡರಿ ಸಹಿತ 58 ರನ್ ಬಾರಿಸಿ ಔಟಾದರು. ಬಳಿಕ ಕ್ರೀಸ್‌ಗೆ ಬಂದ ವಿ.ಕೆ. ವಿನೀತ್ (24 ರನ್, 21 ಎಸೆತ) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಸದ್ಯ ನಾಯಕ ಲಕ್ಷ್ಯ ರಾಯ್‌ಚಂದಾನಿ (60* ರನ್) ಅರ್ಧಶತಕ ಪೂರೈಸಿ ಕ್ರೀಸ್‌ನಲ್ಲಿದ್ದು, ಅವರಿಗೆ ಅರ್ಜುನ್ ರಜಪೂತ್ ಸಾಥ್ ನೀಡುತ್ತಿದ್ದಾರೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಆರಂಭಿಕ ಆಟಗಾರ ಉಸ್ಮಾನ್ ಖಾನ್ ಸಿಡಿಸಿದ ಭರ್ಜರಿ ಶತಕ (107 ರನ್, 111 ಎಸೆತ) ಹಾಗೂ ಅಬ್ದುಲ್ ಖಾದಿರ್ (80 ರನ್, 54 ಎಸೆತ, 8 ಸಿಕ್ಸರ್) ಮತ್ತು ನಾಯಕ ಫರ್ಹಾನ್ ಯೂಸುಫ್ (63 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಪೇರಿಸಿತು. ಭಾರತದ ಪರ ಡೆತ್ ಓವರ್‌ಗಳಲ್ಲಿ ಮಿಂಚಿದ ಕಾವ್ಯ ಪಟೇಲ್ 4 ವಿಕೆಟ್ ಹಾಗೂ ಚಿಗುರುಪಾಟಿ ವೆಂಕಟ 3 ವಿಕೆಟ್ ಕಬಳಿಸಿ ಪಾಕ್ 350ರ ಗಡಿ ದಾಟದಂತೆ ಕಟ್ಟಿಹಾಕಿದರು.