ಬೆಂಗಳೂರು, ಮೇ 14: ಅಂಗವಿಕಲರಿಗಾಗಿ ಸಮರ್ಥನಂ ಟ್ರಸ್ಟ್ ಸಂಸ್ಥೆಯು [Quin Bay Technologies Private Limited ಸಹಯೋಗದಲ್ಲಿ ಆಯೋಜಿಸಿರುವ “ಸಮರ್ಥನಂ ಕಪ್ 2026 – ಕರ್ನಾಟಕ ಪುರುಷರ ಅಂಧರ ಕ್ರಿಕೆಟ್ ಟೂರ್ನಿ” ಇದೀಗ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಮೇ 12ರಂದು Ramu Sports Arena ನಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಡಾ.ಮಾಂತೇಶ G K ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಅಂಧರ ಕ್ರಿಕೆಟ್ ಸಂಘ (KCAB) ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿರುವ 8 ತಂಡಗಳು ಮೂರು ದಿನಗಳ ಲೀಗ್ ಹಂತದಲ್ಲಿ ಒಟ್ಟು 12 ಪಂದ್ಯಗಳನ್ನು ಆಡಿದ್ದು, ಇದೀಗ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ.
ನಾಳೆ ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ:
- ದೀಪ ಅಕಾಡೆಮಿ ಬೆಂಗಳೂರು ತಂಡವು JSB ರಾಮನಗರ ತಂಡವನ್ನು ಎದುರಿಸಲಿದೆ.
- ಸಮರ್ಥನಂ ಬೆಂಗಳೂರು ತಂಡವು ಆಶಾಕಿರಣ ಚಿಕ್ಕಬಳ್ಳಾಪುರ ತಂಡದ ವಿರುದ್ಧ ಸೆಣಸಲಿದೆ.
ಇದಾದ ಬಳಿಕ ಮಧ್ಯಾಹ್ನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯ ವಿಜೇತ ತಂಡಕ್ಕೆ ₹31,000 ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್-ಅಪ್ ತಂಡಕ್ಕೆ ₹21,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ. ಇತರೆ ತಂಡಗಳಿಗೆ ₹10,000 ಪ್ರೋತ್ಸಾಹ ಧನ ನೀಡಲಾಗುತ್ತದೆ. ದೃಷ್ಟಿಹೀನ ಕ್ರಿಕೆಟಿಗರಿಗೆ ಸ್ಪರ್ಧಾತ್ಮಕ ವೇದಿಕೆ ಒದಗಿಸುವುದರ ಜೊತೆಗೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ತರಬೇತಿ ಶಿಬಿರಗಳಿಗೆ ಪ್ರತಿಭಾವಂತ ಆಟಗಾರರನ್ನು ಗುರುತಿಸುವ ಉದ್ದೇಶವೂ ಈ ಟೂರ್ನಿಯದ್ದಾಗಿದೆ.























