Home Advertisement
Home ಕ್ರೀಡೆ ‘ವೈಫಲ್ಯಗಳೇ ಯಶಸ್ಸಿಗೆ ಮೆಟ್ಟಿಲು’: ಶತಕದ ಸಾಧನೆಯ ಬಳಿಕ ಮನದ ಮಾತು ಹಂಚಿಕೊಂಡ ಕಿಂಗ್ ಕೊಹ್ಲಿ

‘ವೈಫಲ್ಯಗಳೇ ಯಶಸ್ಸಿಗೆ ಮೆಟ್ಟಿಲು’: ಶತಕದ ಸಾಧನೆಯ ಬಳಿಕ ಮನದ ಮಾತು ಹಂಚಿಕೊಂಡ ಕಿಂಗ್ ಕೊಹ್ಲಿ

0
66

ರಾಯಪುರ: IPL 2026 RCB vs KKR ಪಂದ್ಯ ಅಭಿಮಾನಿಗಳಿಗೆ ಬಂಪರ್‌ ಸುದ್ದಿ ನೀಡಿದೆ. ಸತತ ಎರಡು ಪಂದ್ಯಗಳ ವೈಫಲ್ಯ ಅನುಭವಿಸಿದ ನಂತರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಅಬ್ಬರದ ಶತಕ ಸಿಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರಸ್ತಂಭ ವಿರಾಟ್ ಕೊಹ್ಲಿ, ಪಂದ್ಯದ ನಂತರ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಯಶಸ್ಸಿನಷ್ಟೇ ವೈಫಲ್ಯಗಳು ಕೂಡ ಮುಖ್ಯ,” ಎಂದು ಹೇಳುವ ಮೂಲಕ ತಮ್ಮ ಲಯಕ್ಕೆ ಮರಳಿದ ಹಾದಿಯನ್ನು ವಿವರಿಸಿದ್ದಾರೆ.

ಕಳೆದ ಪಂದ್ಯಗಳಲ್ಲಿ ಲಖನೌ ಮತ್ತು ಮುಂಬೈ ವಿರುದ್ಧ ಸತತವಾಗಿ ಶೂನ್ಯಕ್ಕೆ ಔಟ್ ಆಗಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಕುರಿತು ಮಾತನಾಡಿದ ಕಿಂಗ್, “ನಾನು ಸದಾ ಆಟವನ್ನು ಸರಳವಾಗಿ ಇಟ್ಟುಕೊಳ್ಳಲು ಬಯಸುತ್ತೇನೆ. ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡುವ ಆತ್ಮವಿಶ್ವಾಸವಿದ್ದರೂ, ಸತತ ವೈಫಲ್ಯಗಳು ಸಹಜವಾಗಿಯೇ ಒತ್ತಡಕ್ಕೆ ಕಾರಣವಾಗಿದ್ದವು. ತಂಡಕ್ಕಾಗಿ ಕೊಡುಗೆ ನೀಡಲು ಸಾಧ್ಯವಾಗದಿದ್ದಾಗ ಆತಂಕವಾಗುವುದು ಸಹಜ. ಆದ್ರೆ ಅಂತಹ ಕಠಿಣ ಸಮಯವೇ ಒಬ್ಬ ಆಟಗಾರನಾಗಿ ಮತ್ತೆ ʻಪುಟಿದೇಳಲು ಪ್ರೇರಣೆʼ ನೀಡುತ್ತದೆ,” ಎಂದು ಹೇಳಿಕೊಂಡರು.

ದಾಖಲೆಯ 9ನೇ ಶತಕದ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, “ಶತಕ ಗಳಿಸುವುದು ಸಂತೋಷ ನೀಡಿದರೂ, ತಂಡಕ್ಕೆ ಸಿಕ್ಕ ಎರಡು ಅಂಕಗಳು ನನಗೆ ಹೆಚ್ಚು ಮುಖ್ಯವೆನಿಸಿವೆ. ಸಂಭ್ರಮಾಚರಣೆಗಿಂತ ತಂಡದ ಜಯದಲ್ಲಿ ನನ್ನ ಪಾತ್ರವಿರುವುದು ತೃಪ್ತಿ ತಂದಿದೆ. ಅತ್ಯುನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಸವಾಲುಗಳು ಎದುರಾದಾಗ ಅವುಗಳನ್ನು ಎದುರಿಸಲು ನಾನು ಸದಾ ಸಿದ್ಧನಿರುತ್ತೇನೆ,” ಎಂದರು.

ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಭದ್ರ ಸ್ಥಾನ ಪಡೆದಿದ್ದು, ಕೊಹ್ಲಿ ಈ ಸಮಯೋಚಿತ ಪ್ರದರ್ಶನವು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ವೈಫಲ್ಯಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸಾಧನೆ ಮಾಡಿದ ಕೊಹ್ಲಿ ಗುಣ ಇಂದಿನ ಯುವ ಆಟಗಾರರಿಗೆ ಮಾದರಿಯಾಗಿದೆ.