ಚಂಡೀಗಢ: ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಮುಲ್ಲನ್ಪುರ್ದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗಳಿಗೆ 564 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ಕೇವಲ 152 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 412 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ, ಅಫ್ಘಾನ್ ತಂಡಕ್ಕೆ ಫಾಲೋ ಆನ್ ಹೇರಿತು.
ಬಳಿಕ ಮತ್ತೆ ಬ್ಯಾಟಿಂಗ್ಗೆ ಇಳಿದ ಅಫ್ಘಾನಿಸ್ತಾನ ಕೇವಲ 112 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 300 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ.
ಭಾನುವಾರ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಅಫ್ಘಾನಿಸ್ತಾನ್ ಎರಡನೇ ದಿನದಾಟದ ಅಂತ್ಯಕ್ಕೆ 39.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 113 ರನ್‌ಗಳನ್ನು ಗಳಿಸಿತ್ತು. ಇಂದು ಆಟ ಮುಂದುವರಿಸಿ ಕೇವಲ 39 ರನ್‌ಗಳಿಸಿವಷ್ಟರಲ್ಲಿಯೇ ಆಲೌಟ್ ಆಯಿತು.
ಫಾಲೋ ಆನ್ ಬಳಿಕ 35.5 ಓವರ್‌ಗಳಲ್ಲಿಯೇ 112 ರನ್‌ಗಳಿಗೆ ಅಫ್ಘಾನ್ ಸೋಲಿಗೆ ಶರಣಾಯಿತು. ಸೆಡಿಕುಲ್ಲಾ ಅಟಲ್ 42, ರಹಮಾನುಲ್ಲಾ ಗುರ್ಬಾಜ್ 24 ಮತ್ತು ರಹಮತ್ ಶಾ 13 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನೂ ಎರಡಂಕಿ ಮೊತ್ತ ತಲುಪಲಿಲ್ಲ.
ಭಾರತದ ಪರ ವಾಷಿಂಗ್ಟನ್ ಸುಂದರ 36ಕ್ಕೆ 4 ವಿಕೆಟ್, ಕುಲದೀಪ್ ಯಾದವ್ 30ಕ್ಕೆ 3 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಮಾನವ್ ಸುತಾರ್ ಕೇವಲ 33 ರನ್‌ಗಳಿಗೆ 6 ವಿಕೆಟ್ ಉರುಳಿಸಿ ಮಿಂಚಿದರು. ಇನ್ನು ಪ್ರಸಿದ್ಧ ಕೃಷ್ಣ 37ಕ್ಕೆ 3 ವಿಕಟ್ ಪಡೆದರು.






















