ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು, ಕಸ್ಟಮ್ಸ್ ಅಧಿಕಾರಿಗಳು ಭಾರಿ ಪ್ರಮಾಣದ ಡ್ರಗ್ಸ್ ಬೇಟೆಯಾಡಿದ್ದಾರೆ. ಬರೋಬ್ಬರಿ 2.33 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಬಂದಿದ್ದ ಓರ್ವ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್‌ಗೆ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನೊಬ್ಬನ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಈ ವೇಳೆ ಆತನ ಲಗೇಜ್ ಬ್ಯಾಗ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ಪತ್ತೆಯಾಗಿದೆ. ಪ್ಯಾಕೆಟ್‌ಗಳಲ್ಲಿ ಅಡಗಿಸಿಡಲಾಗಿದ್ದ ಒಟ್ಟು 6.66 ಕೆಜಿ ತೂಕದ ಅತ್ಯಂತ ದುಬಾರಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಪ್ತಿ ಮಾಡಲಾದ ಈ ಹೈಡ್ರೋಪೋನಿಕ್ ಗಾಂಜಾದ ಅಂದಾಜು ಮೌಲ್ಯ ಸುಮಾರು 2.33 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಗಾಂಜಾ ಸಮೇತ ಸಿಕ್ಕಿಬಿದ್ದಿರುವ ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ಈತ ಯಾರು? ಈ ಡ್ರಗ್ಸ್ ಜಾಲದ ಹಿಂದೆ ಯಾರಿದ್ದಾರೆ? ಹಾಗೂ ಬೆಂಗಳೂರಿನಲ್ಲಿ ಯಾರಿಗೆ ಇದನ್ನು ತಲುಪಿಸಲು ತರಲಾಗಿತ್ತು? ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಈ ಹದ್ದಿನ ಕಣ್ಣಿನ ಕಾರ್ಯಾಚರಣೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿಯಾಗಿದೆ.






















