SK Home Ad
Home ಕ್ರೀಡೆ ವಾಂಖೆಡೆ ಕ್ರೀಡಾಂಗಣದಲ್ಲಿ ಮಕ್ಕಳ ಹರ್ಷೋದ್ಗಾರದ ಪ್ರತಿಧ್ವನಿ

ವಾಂಖೆಡೆ ಕ್ರೀಡಾಂಗಣದಲ್ಲಿ ಮಕ್ಕಳ ಹರ್ಷೋದ್ಗಾರದ ಪ್ರತಿಧ್ವನಿ

0
19

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಪಂದ್ಯವನ್ನು ಕ್ರಿಕೆಟ್‌ನ ರೋಮಾಂಚನ ಮಾತ್ರವಲ್ಲ, ಮಕ್ಕಳ ಧ್ವನಿ, ಉತ್ಸಾಹ ಮತ್ತು ನಗುವಿನ ವಾತಾವರಣ ವಿಶೇಷವಾಗಿಸಿತ್ತು.

ಮುಂಬೈ ಇಂಡಿಯನ್ಸ್‌ನ ವಾರ್ಷಿಕ ‘ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ’ ಅಭಿಯಾನದ ಭಾಗವಾಗಿ ಪಂದ್ಯದಲ್ಲಿ ತಮ್ಮ ನೆಚ್ಚಿನ ಆಟಗಾರರು ಆಡುವುದನ್ನು ನೇರವಾಗಿ ವೀಕ್ಷಿಸಲು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಮಕ್ಕಳು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಮುಂಬೈ ಇಂಡಿಯನ್ಸ್ ಮತ್ತು ರಿಲಯನ್ಸ್ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಈ ‘ಇಎಸ್ಎ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೊದಲ ಬಾರಿಗೆ 100 ಅಂಧ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಪಂದ್ಯಕ್ಕೆ ಹಾಜರಾಗಿದ್ದರು. 200ಕ್ಕೂ ಅಧಿಕ ವಿಶೇಷ ಚೇತನ ಮಕ್ಕಳು ಸಹ ಈ ಅನುಭವದ ಭಾಗವಾಗಿದ್ದರು. ಮುಂಬೈ, ಸತಾರಾ, ನಾಸಿಕ್, ಇಗತ್ಪುರಿ ಮತ್ತು ಇತರ ದೂರದ ಪ್ರದೇಶಗಳಿಂದ ಮಕ್ಕಳು ಆಗಮಿಸಿದ್ದರು.

ʻಮಕ್ಕಳ ಸಂತೋಷ ಮತ್ತು ಉತ್ಸಾಹವು ಈ ದಿನವನ್ನು ವಿಶೇಷವಾಗಿಸಿದೆ’ ಎಂದು ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಹೇಳಿದರು. ʻ16 ವರ್ಷಗಳ ಹಿಂದೆ ಆರಂಭವಾದಾಗಿನಿಂದ ಇಎಸ್ಎ ಅಭಿಯಾನದ ಪ್ರಮುಖ ಅಂಗವಾಗಿ ಈ ವಿಶೇಷ ನೆನಪುಗಳ ಕ್ಷಣ ಸೇರ್ಪಡೆಯಾಗಿದೆ’ ಎಂದ ಅವರು, ಅಂಧ ಮಕ್ಕಳನ್ನು ಉಲ್ಲೇಖಿಸುತ್ತಾ, ʻಈ ಮಕ್ಕಳು ಅನೇಕ ಸುಂದರವಾದ ನೆನಪುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ’ ಎಂದರು.

ಈ ಕಾರ್ಯಕ್ರಮಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮಕ್ಕಳ ಪ್ರಯಾಣಕ್ಕಾಗಿ 550ಕ್ಕೂ ಹೆಚ್ಚು ಅತ್ಯುತ್ತಮ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಸುಮಾರು 2,400 ಸ್ವಯಂಸೇವಕರು, 100ಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ, 92,000 ಆಹಾರ ಪೊಟ್ಟಣಗಳು ಮತ್ತು ಸಮನ್ವಯ ತಂಡಗಳನ್ನು ದಿನವಿಡೀ ಮಕ್ಕಳ ವ್ಯವಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಲು ನೇಮಿಸಲಾಗಿತ್ತು. ಮುಂಬೈ ಪೊಲೀಸ್ ಇಲಾಖೆಯಿಂದ 1,000ಕ್ಕೂ ಹೆಚ್ಚು ಪೊಲೀಸರು ಮತ್ತು ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕ್ರೀಡೆ ಕೇವಲ ಮೈದಾನಕ್ಕೆ ಸೀಮಿತವಾಗಿರಬಾರದು, ಬದಲಾಗಿ ಮಕ್ಕಳಿಗೆ ಕಲಿಕೆ, ಸ್ಫೂರ್ತಿ ಮತ್ತು ಹೊಸ ಅವಕಾಶಗಳ ಮೂಲವಾಗಿ ಕಾರ್ಯನಿರ್ವಹಿಸಬೇಕು ಎಂಬ ದೃಷ್ಟಿಕೋನದೊಂದಿಗೆ ‘ಇಎಸ್ಎ’ ಅನ್ನು ಸ್ಥಾಪಿಸಲಾಗಿದೆ. ಇದು ವೈವಿಧ್ಯಮಯ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ಮಕ್ಕಳನ್ನು ಕ್ರೀಡಾ ವೇದಿಕೆಗೆ ಸಂಪರ್ಕಿಸಲು ಮತ್ತು ಪ್ರೇರೇಪಿಸಲು ಶ್ರಮಿಸುತ್ತದೆ.

ಕಳೆದ 16 ವರ್ಷಗಳಲ್ಲಿ ರಿಲಯನ್ಸ್ ಫೌಂಡೇಶನ್‌ನ ಎಲ್ಲರಿಗೂ ಕ್ರೀಡೆ ಮತ್ತು ಶಿಕ್ಷಣ ಅಭಿಯಾನವು ದೇಶಾದ್ಯಂತ 2.9 ಕೋಟಿಗೂ ಅಧಿಕ ಮಕ್ಕಳು ಮತ್ತು ಯುವಕರನ್ನು ತಲುಪಿದೆ.