ಧರ್ಮಶಾಲಾ: ಈ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಹಾಗೂ 60 ಲೀಗ್ ಪಂದ್ಯಗಳು ಅಂತ್ಯಗೊಂಡ ಬಳಿಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ.
2025ರ ಐಪಿಎಲ್‌ನ ಫೈನಲ್ ಸೇರಿದ್ದ ಈ ತಂಡಗಳು ಇಂದು ಮುಖಾಮುಖಿಗೊಳ್ಳುತ್ತಿರುವುದು ವಿಶೇಷವಷ್ಟೇ ಅಲ್ಲ, ಅಕ್ಷರಶಃ ಈ ಎರಡು ತಂಡಗಳ ಭವಿಷ್ಯವೇ ಇಂದಿನ ಪಂದ್ಯದಲ್ಲಿ ಅಡಗಿದೆ. ಒಬ್ಬರಿಗೆ ಗೆಲುವು ಪ್ಲೇಆಫ್‌ನಲ್ಲಿ ಜಾಗ ಗಿಟ್ಟಿಸಿದರೆ, ಇನ್ನೊಬ್ಬರಿಗೆ ಸೋಲು ಟೂರ್ನಿಯಿಂದಲೇ ಹೊರಗಿಡಲಿದೆ.
ಹಿಮಾಚಲ ಪ್ರದೇಶದ ಅತ್ಯಂತ ಸುಂದರವಾದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯ, ಎರಡೂ ತಂಡಗಳಿಗೂ ಪ್ಲೇ-ಆಫ್ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ 12 ಪಂದ್ಯಗಳಿಂದ 8 ಜಯ ಸಾಧಿಸಿರುವ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ. ಮುಂಬೈ ಮತ್ತು ಕೋಲ್ಕತಾ ವಿರುದ್ಧ ಸತತ ಗೆಲುವು ದಾಖಲಿಸಿ ಉತ್ತಮ ಫಾರ್ಮ್‌ನಲ್ಲಿರುವ ಬೆಂಗಳೂರು ತಂಡಕ್ಕೆ ಇಂದು ಗೆದ್ದರೆ ಪ್ಲೇ-ಆಫ್ ಸ್ಥಾನ ಅಧಿಕೃತವಾಗಲಿದೆ.
ರನ್ ಮೆಷಿನ್ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಬೇಟೆಯಾಡುತ್ತಿದ್ದು, ತಂಡದ ಬಲ ಹೆಚ್ಚಿಸಿದ್ದಾರೆ. ನಾಯಕ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಮತ್ತೊಂದು ಜಯದ ತವಕದಲ್ಲಿದೆ.
ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲುಗಳೊಂದಿಗೆ ಪಂಜಾಬ್ 13 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.
ಆರಂಭದಲ್ಲಿ ಸತತ 6 ಪಂದ್ಯ ಗೆದ್ದಿದ್ದ ಪಂಜಾಬ್, ನಂತರ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿ ಭಾರಿ ಹಿನ್ನಡೆ ಅನುಭವಿಸಿದೆ. ಪ್ಲೇ-ಆಫ್ ಆಸೆ ಜೀವಂತವಾಗಿಡಬೇಕಾದರೆ ಪಂಜಾಬ್ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಅಜ್ಮತುಲ್ಲಾ ಒಮರ್ಜಾಯ್ ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳಿರುವುದು ತಂಡಕ್ಕೆ ಸಮಾಧಾನ ತಂದಿದ್ದರೂ, ಅರ್ಷದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಹಾಲ್ ಒಳಗೊಂಡ ಬೌಲಿಂಗ್ ವಿಭಾಗ ಕಮ್‌ಬ್ಯಾಕ್ ಮಾಡಬೇಕಿದೆ.
ಧರ್ಮಶಾಲಾದಲ್ಲಿ ರನ್ ಮಳೆಗೆ ಹೆಸರುವಾಸಿ. ಇಲ್ಲಿ 2026ರ ಕಳೆದ ಎರಡೂ ಪಂದ್ಯಗಳಲ್ಲಿ 200 ಪ್ಲಸ್ ರನ್‌ಗಳು ದಾಖಲಾಗಿದ್ದು, ಚೇಸಿಂಗ್ ಮಾಡಿದ ತಂಡಗಳೇ ಜಯ ಸಾಧಿಸಿವೆ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.























