Home Advertisement
Home ನಮ್ಮ ಜಿಲ್ಲೆ ಧಾರವಾಡ ಐಸ್‌ಕ್ರೀಂ ವ್ಯಾಪಾರಿ ಬಹುಕೋಟಿ ವಂಚಕ!

ಐಸ್‌ಕ್ರೀಂ ವ್ಯಾಪಾರಿ ಬಹುಕೋಟಿ ವಂಚಕ!

0
100

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ನಿಯಮಬಾಹಿರವಾಗಿ ಕೋಟ್ಯಾಂತರ ರೂ. ಠೇವಣಿ ಪಡೆದ ಆರೋಪದ ಮೇಲೆ ಬಂಧನವಾಗಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಐಸ್ ಕ್ರೀಂ ಮಾರುತ್ತ ವೃತ್ತಿ ಜೀವನವನ್ನು ಆರಂಭಿಸಿದ್ದ ಎಂದರೆ ನೀವು ನಂಬಲೇಬೇಕು.

ಮೂಲತಃ ಹುಬ್ಬಳ್ಳಿ ಉಣಕಲ್ಲ ಗ್ರಾಮದ ದುರ್ಗದ ಓಣಿಯವನಾದ ಶಿವಾನಂದ ನೀಲಣ್ಣವರ ತಂದೆ ನಿವೃತ್ತ ಸೈನಿಕರು. ಸೈನ್ಯದಿಂದ ನಿವೃತ್ತಿಯಾದ ನಂತರ ಕೆಇಬಿ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಿಧನರಾಗಿದ್ದರು. ತಂದೆಯ ನೌಕರಿ ಶಿವಾನಂದನ ಸೋದರನಿಗೆ ಸಿಕ್ಕಿತ್ತು. ಬಳಿಕ, ಅವರಿಗೆ ಬೆಳಗಾವಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಬೆಳಗಾವಿಗೆ ಹೋಗಿ ನೆಲೆಸಿತ್ತು.

ದ್ವಿತೀಯ ಪಿಯುಸಿಯವರೆಗೆ ಶಿಕ್ಷಣ ಪಡೆದಿರುವ ಶಿವಾನಂದ, 2004 ರಿಂದ 2006ರವರೆಗೆ ಹುಬ್ಬಳ್ಳಿಯ ಬೀದಿ ಬೀದಿಗಳಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಐಸ್ ಕ್ರೀಂ ಮಾರುತ್ತಿದ್ದ. ಕೋಟಕ್ ಮಹಿಂದ್ರಾ ಇನ್ಸುರೆನ್ಸ್ ಕಂಪನಿಯಲ್ಲೂ ಕೆಲವರ್ಷ ಕಾರ್ಯ ನಿರ್ವಹಿಸಿದ್ದಾರೆ. ಇದಾದ ಬಳಿಕ 2012ರಲ್ಲಿ ಷೇರು ಪೇಟೆಯಲ್ಲಿ ಹೂಡಿಕೆ ಆರಂಭಿಸಿದ್ದ. ಆದರೆ, ಅದು ಶಿವಾನಂದನ ಕೈ ಹಿಡಿಯಲಿಲ್ಲ. ಆಗ, ಯಾಕೆ ಹೂಡಿಕೆ ಸಂಸ್ಥೆಯನ್ನು ಆರಂಭಿಸಬಾರದೆಂದು ಯೋಚಿಸಿ `ಅಕ್ಯೂಮೆನ್’ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳಲು ಶುರು ಮಾಡಿದ್ದ. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ರೂ. ಹೂಡಿಕೆಯಾಗಿದೆ. ಈ ಪೈಕಿ ಹುಬ್ಬಳ್ಳಿ ಜನರದ್ದೇ ಹತ್ತಾರು ಕೋಟಿ ರೂ. ಹೂಡಿಕೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿವಾನಂದ ನೀಲಣ್ಣವರ ಸುಮಾರು 35 ಸಾವಿರ ಜನರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿದ್ದು, ಬೆಳಗಾವಿಯಲ್ಲಿ ಬಂಧನವಾದ ಬಳಿಕ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಖ್ಯೆ ಇನ್ನೂ ಸ್ಪಷ್ಟವಾಗಬೇಕಿದೆ. ಈ ಮೊತ್ತದಲ್ಲಿ ಹುಬ್ಬಳ್ಳಿಯ ಜನರದ್ದೂ ಪಾಲಿದೆ. ಶಿವಾನಂದನ ಬಳಿ ಹೂಡಿಕೆ ಮಾಡಿದ ಹುಬ್ಬಳ್ಳಿಗರು, ಶಿವಾನಂದನ ಬಂಧನವಾಗುತ್ತಿದ್ದಂತೆ ಥಂಡಾ ಹೊಡೆದಿದ್ದಾರೆ.

ಹೂಡಿಕೆಯ ಹಣದ ಬಗ್ಗೆ ಹೊರಗಡೆ ಹೇಳಿಕೊಂಡರೆ ಆದಾಯ ತೆರಿಗೆ, ಇಡಿ ಹಾಗೂ ಪೊಲೀಸರು ನಮ್ಮನ್ನೂ ಎಲ್ಲಿ ವಿಚಾರಣೆಗೆ ಒಳಪಡಿಸುತ್ತಾರೋ ಎಂಬ ಭಯದಲ್ಲಿ ಹೂಡಿಕೆದಾರರು ಇದ್ದಾರೆ. ಅದೇನೇ ಆಗಲಿ ನಿವೃತ್ತ ಸೈನಿಕರು, ರೈತರು ಹಾಗೂ ಸಾರ್ವಜನಿಕರು ತಮ್ಮ ಠೇವಣಿಗೆ ಅಧಿಕ ಲಾಭ ದೊರೆಯುತ್ತದೆ ಎಂಬ ಕಾರಣಕ್ಕೆ ತಮ್ಮ ಜೀವಮಾನದ ಉಳಿತಾಯವನ್ನು ಶಿವಾನಂದನ ಬಳಿ ಠೇವಣಿ ಇರಿಸಿದ್ದರು. ಅವರಿಗೆಲ್ಲ ಮೋಸ ಆಗದಿರಲಿ ಎಂಬುದು ನಮ್ಮ ಆಶಯ.

ಈತನ ತಂದೆ ನಿವೃತ್ತ ಸೈನಿಕ: ಶಿವಾನಂದನ ತಂದೆ ನಿವೃತ್ತ ಸೈನಿಕರು. ಬಳಿಕ ಕೆಇಬಿಯಲ್ಲೂ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಆದ್ದರಿಂದ ಸಹಜವಾಗಿಯೇ ನಿವೃತ್ತ ಸೈನಿಕರ ಮತ್ತು ಕೆಇಬಿ ನೌಕರರ ಒಡನಾಟ ಶಿವಾನಂದ ಅವರಿಗಿತ್ತು. ಇದನ್ನೇ ಬಂಡವಾಳವನ್ನಾಗಿಸಿ ತಂದೆಯ ಹೆಸರನ್ನು ಬಳಸಿಕೊಂಡು ಹೆಚ್ಚಿನ ಬಡ್ಡಿಯ ಆಮಿಷ ಒಡ್ಡಿ ನೂರಾರು ಕೋಟಿ ರೂ. ಠೇವಣಿ ಪಡೆದಿದ್ದ.