ಬೆಂಗಳೂರು: “ಯಶವಂತರಾಯಗೌಡ ಪಾಟೀಲ್ ಅವರು ರಾಜೀನಾಮೆಗೆ ಮುಂದಾಗಿದ್ದು ರೈತರ ಬದುಕಿಗಾಗಿಯೇ ಹೊರತು, ಈಶ್ವರಪ್ಪ ಅವರು ಹೇಳಿದ್ದ 15 ಜನರನ್ನು ಕೊಟ್ಟು, ಕೊಳ್ಳುವ ರಾಜೀನಾಮೆ ರೀತಿ ಅಲ್ಲ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಬುಧವಾರ ಬರ ವಿಚಾರ ಕುರಿತ ಚರ್ಚೆ ವೇಳೆ ವಿರೋಧ ಪಕ್ಷಗಳ ನಾಯಕರು ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಪ್ರದರ್ಶಿಸಿ ಗದ್ದಲ ಎಬ್ಬಿಸಿದಾಗ, ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
“ವಿರೋಧ ಪಕ್ಷದವರು ಬಹಳ ಆತುರದಲ್ಲಿ ರಾಜಕಾರಣ ಮಾಡಲು ಬಡಿದಾಡುತ್ತಿದ್ದಾರೆ. ಏನೋ ದೊಡ್ಡದಾಗಿ ಆಚೆ ಬಂದಿದೆ ಎಂದು ಕೂಗಾಡುತ್ತಿರುವುದನ್ನು ಟಿವಿಯಲ್ಲಿ ನೋಡಿ ನಾನು ಇಲ್ಲಿಗೆ ಬಂದೆ. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿದ್ದು, ಪ್ರಧಾನಮಂತ್ರಿಗಳು ನಮಗೆ ಭೀಕರ ಬರ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಾವು ವಿವಿಧ ಪ್ರದೇಶಗಳ ಪರಿಸ್ಥಿತಿಗಳನ್ನು ನೋಡಿದ್ದೇವೆ. ಕಳೆದ ಅಧಿವೇಶನದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡಲೆಂದೇ, ಬರದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಿರಲಿಲ್ಲ. ಇಂದು ಎಲ್ಲಾ ಶಾಸಕರು ಅವರವರ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವ ಉದ್ದೇಶದಿಂದಲೇ ಈ ಅಧಿವೇಶನ ನಡೆಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದರು.
“ಸದ್ಯ ಭೀಕರ ಬರಗಾಲ ಎದುರಾಗಿದ್ದು, ನಾನು ರಾಜ್ಯದ ವಿವಿಧ ಭಾಗಗಳಿಗೆ ಹೋಗಿ, ನನಗಿದ್ದ ಸಮಯದಲ್ಲಿ ಸಾಧ್ಯವಾದಷ್ಟು ಪ್ರದೇಶದಲ್ಲಿ ಪರಿಶೀಲನೆ ಮಾಡಿದ್ದೇನೆ. ನಾನು ಮೊದಲು ಗದಗ ಜಿಲ್ಲೆಗೆ ಹೋಗಿ ಪರಿಶೀಲನೆ ಮಾಡಿದ್ದೆ. ಯಶವಂತರಾಯಗೌಡ ಪಾಟೀಲ್ ಅವರ ವಿಚಾರ ಪ್ರಸ್ತಾಪಿಸಲಾಗಿದೆ. ನಾನು ಯಶವಂತರಾಯಗೌಡ ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲಿ ಜನರು ಸಾಲ ಮಾಡಿ ಬೆಳೆ ಹಾಕಿದ್ದಾರೆ. ಈ ರೈತರಿಗೆ ಪರಿಹಾರ ನೀಡಬೇಕು” ಎಂದರು.
“ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಬೇಕಿದೆ. ನಾವು ಇಲ್ಲಿಂದ ಏನೇ ವರದಿ ಕಳುಹಿಸಿದರೂ ಅದು ತಲುಪುವುದು ಕೇಂದ್ರಕ್ಕೆ. ನೀವು ಸ್ಪೀಕರ್ ಎನ್ನುವ ಕಾರಣಕ್ಕೆ ನಿಮ್ಮ ಕ್ಷೇತ್ರವನ್ನು ಬರ ಪ್ರದೇಶ ಎಂದು ಘೋಷಣೆ ಮಾಡುವ ಅಧಿಕಾರ ಇಲ್ಲ. ಬರ ಘೋಷಣೆ ಮಾಡಬೇಕು ಎಂದರೆ ಅದಕ್ಕೆ ಅದರದೇ ಆದ ಮಾನದಂಡಗಳಿವೆ. 21 ದಿನಗಳ ಕಾಲ ಮಳೆ ಬೀಳಬಾರದು. ಇಂತಿಷ್ಟು ಪ್ರಮಾಣದ ಮಳೆ ಕೊರತೆ ಇರಬೇಕು ಎಂಬ ಮಾರ್ಗಸೂಚಿಗಳಿವೆ. ನಮ್ಮ ಶಾಸಕರು ಸೇರಿದಂತೆ ಅನೇಕರು ನಮ್ಮ ತಾಲ್ಲೂಕನ್ನು ಬರ ಪಟ್ಟಿಗೆ ಸೇರಿಸಿ ಎಂದು ಮನವಿ ಪತ್ರ ನೀಡಿದ್ದಾರೆ. ನಾನು ಯಾವ ಕ್ಷೇತ್ರವನ್ನು ಸೇರಿಸಿಲ್ಲ. ಎಲ್ಲಾ ಜವಾಬ್ದಾರಿಯನ್ನು ಪರಮೇಶ್ವರ್ ಅವರಿಗೆ ವಹಿಸಿದ್ದೇನೆ” ಎಂದರು.
“ಈ ಮಧ್ಯೆ ಎಲ್ಲರ ಒತ್ತಡದ ಮೇರೆಗೆ ಮೋಡ ಬಿತ್ತನೆ ಪ್ರಯತ್ನಕ್ಕೂ ಮುಂದಾಗಿದ್ದೇವೆ. ಕೆಲವು ಭಾಗದಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಭಾಗದಲ್ಲಿ ಯಶಸ್ವಿಯಾಗಿಲ್ಲ. ಮೋಡಗಳು ಬಂದರೆ ನಾವು ಬಿತ್ತನೆ ಮಾಡಲು ಸಾಧ್ಯ. ಹೆಚ್.ಕೆ. ಪಾಟೀಲರಂತಹ ಹಿರಿಯ ನಾಯಕರ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಒತ್ತಡ ಇರಬೇಕಾದರೆ, ನಮ್ಮ ಯಶವಂತರಾಯಗೌಡ ಪಾಟೀಲ್ ಅವರು ಬೇಸರಗೊಂಡಿರುವುದರಲ್ಲಿ ತಪ್ಪಿಲ್ಲ” ಎಂದರು.
“ಬರದ ವಿಚಾರದಲ್ಲಿ ನಾವು ಪಕ್ಷಭೇದ ಮಾಡುತ್ತಿಲ್ಲ. 224 ಕ್ಷೇತ್ರಗಳು ಒಂದೇ. ಮಳೆ ಎಲ್ಲಿ ಬಿದ್ದಿಲ್ಲವೋ ಮಾನದಂಡಗಳ ಅನುಸಾರ ಬರ ಘೋಷಣೆ ಮಾಡಲಾಗಿದೆ. ನನ್ನ ಕ್ಷೇತ್ರದ ಒಂದು ಭಾಗದಲ್ಲಿ ಮಾತ್ರ ಮಳೆಯಾಗಿದೆ. ಉಳಿದ ಭಾಗದಲ್ಲಿ ಮಳೆಯಾಗಿಲ್ಲ. ಆದರೂ ನಾನು ಬರದ ಪಟ್ಟಿಗೆ ಸೇರಿಸುವಂತೆ ಒತ್ತಡ ಹಾಕಿಲ್ಲ. ಯಶವಂತರಾಯಗೌಡ ಪಾಟೀಲ್ ಭಾವನಾತ್ಮಕವಾಗಿ ಬಂದಿದ್ದು ನಿಜ. ಅವರು ಸಭಾಧ್ಯಕ್ಷರ ಬಳಿಗೂ ಬಂದಿದ್ದು, ನೀವು ಸಿಎಂ ಜತೆ ಮಾತನಾಡಿ ಎಂದು ಸಲಹೆ ನೀಡಿದ್ದೀರಿ. ನಾನು ಅವರೊಂದಿಗೆ ಮಾತನಾಡಿ, ಸಮಾಧಾನ ಮಾಡಿ ಅವರನ್ನು ಕಳುಹಿಸಿ ಇಲ್ಲಿಗೆ ಬಂದಿರುವೆ. ಅವರಿಗೂ ಒತ್ತಡವಿದೆ. ಅವರು ತಮ್ಮ ಕ್ಷೇತ್ರದ ಜನರಿಗೆ ಉತ್ತರ ನೀಡಬೇಕಲ್ಲವೇ? ಅವರು ಭಾವನಾತ್ಮಕವಾಗುವುದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದರು.
“ಯಶವಂತರಾಯಗೌಡ ಪಾಟೀಲ್ ಅವರು ಬೇರೆ ಕಾರಣಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈಶ್ವರಪ್ಪ ಅವರು 15 ರಾಜೀನಾಮೆಗಳ ಬಗ್ಗೆ ಹೇಳಿದರಲ್ಲ, ಅಂತಹ ರಾಜೀನಾಮೆ ಅಲ್ಲ. ರೈತರ ಬದುಕಿಗಾಗಿ ನೀಡಲು ಮುಂದಾದ ರಾಜೀನಾಮೆ. ನಾಗೇಂದ್ರ ರಾಜೀನಾಮೆ ವಿಚಾರ ಬೇರೆ. ನಾಗೇಂದ್ರ ಅವರ ರಾಜೀನಾಮೆಯನ್ನು ನಾನೇ ತೆಗೆದುಕೊಂಡಿದ್ದೇನೆ. ಈಶ್ವರಪ್ಪ ಅವರು ಹೇಳಿದ್ದು, ಕೊಟ್ಟು ತೆಗೆದುಕೊಳ್ಳುವ ರಾಜೀನಾಮೆ. ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಬಗ್ಗೆ ವಿರೋಧ ಪಕ್ಷಗಳು ಗಾಬರಿಯಾಗುವುದು ಬೇಡ. ವಿರೋಧ ಪಕ್ಷದವರಾದ ನೀವುಗಳು ಭಾವನಾತ್ಮಕವಾಗಿ ರಾಜೀನಾಮೆ ನೀಡಿದರೂ ನಾವು ಆತುರದಲ್ಲಿ ಅದನ್ನು ಅಂಗೀಕಾರ ಮಾಡುವುದಿಲ್ಲ. ಜನ ನಿಮ್ಮನ್ನು 5 ವರ್ಷಕ್ಕೆ ಆಯ್ಕೆ ಮಾಡಿದ್ದು, ನೀವು ಇಲ್ಲಿ ಇದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕು. ನಾನು 224 ಕ್ಷೇತ್ರಗಳಿಗೆ ಸಿಎಂ ಆಗಿದ್ದು, ಇದು 224 ಕ್ಷೇತ್ರಗಳ ಸರ್ಕಾರ. ಹೀಗಾಗಿ ನೀವು ಬರದ ವಿಚಾರವಾಗಿ ಮುಕ್ತವಾಗಿ ಚರ್ಚೆ ಮಾಡಿ” ಎಂದರು.




















