SK Home Ad
Home ಸುದ್ದಿ ರಾಜ್ಯ ‘ಬಳ್ಳಾರಿ ಚಲೋ’ ಹಿಂದಿನ 5 ನೈಜ ರಹಸ್ಯಗಳೇನು?

‘ಬಳ್ಳಾರಿ ಚಲೋ’ ಹಿಂದಿನ 5 ನೈಜ ರಹಸ್ಯಗಳೇನು?

0
32

ರಾಜ್ಯ ರಾಜಕಾರಣದಲ್ಲಿ ಈಗ ಎಲ್ಲೆಡೆ ಕೇಳಿಬರ್ತಿರೋದು ಒಂದೇ ಹೆಸರು… ಅದು ಬಿಜೆಪಿ ಹಮ್ಮಿಕೊಂಡಿರೋ ʻಬಳ್ಳಾರಿ ಚಲೋʼ ಪಾದಯಾತ್ರೆ, ಚುನಾವಣೆ ಇನ್ನೂ ವರ್ಷಗಳ ಕಾಲ ದೂರವಿದ್ದರೂ, ಕಮಲ ಪಡೆ ಈಗಲೇ ಬೀದಿಗಿಳಿದು ಅಬ್ಬರಿಸ್ತಿರೋದು ಯಾಕೆ? ಇಡೀ ರಾಜ್ಯದ ಗಮನ ಸೆಳೆದಿರೋ ಈ ಪಾದಯಾತ್ರೆ ಕೇವಲ ಸರ್ಕಾರದ ವಿರುದ್ಧದ ಹೋರಾಟವೋ ಅಥವಾ ಪಕ್ಷದ ಒಳಗಿನ ಮುನಿಸಿಗೆ ನೀಡುತ್ತಿರುವ ಉತ್ತರವಾ? ವಿಜಯೇಂದ್ರ ಅವರಿಗೆ ಈ ಯಾತ್ರೆಯಿಂದ ಸಿಗೋ ಲಾಭವೇನು? ಬನ್ನಿ ಪಾದಯಾತ್ರೆಯ 5 ರಹಸ್ಯ ಪಾಯಿಂಟ್‌ಗಳನ್ನು ಇಲ್ಲಿವೆ.

ಪಾಯಿಂಟ್ 1: ಒಗ್ಗಟ್ಟಿನ ಮಂತ್ರ ಮತ್ತು ಒಡಕಿಗೆ ಉತ್ತರ! – ಕಾಂಗ್ರೆಸ್‌ನಲ್ಲಿ ಸದ್ಯ ಭಿನ್ನಮತದ ಹೊಗೆಯಾಡುತ್ತಿರೋದು ಗೊತ್ತೇ ಇದೆ. ಆದರೆ, ಬಿಜೆಪಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎನ್ನುವ ಮಾತು ಸದ್ಯ ದೂರವಾಗಿದ್ದು, ಸರಣಿ ಬಂಡಾಯಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ನಾವು ಒಗ್ಗಟ್ಟಾಗಿದ್ದೇವೆ, ನಮ್ಮೊಳಗೆ ಯಾವುದೇ ಒಡಕಿಲ್ಲ ಎಂದು ಜಗತ್ತಿಗೆ ತೋರಿಸಲು ಈ ಪಾದಯಾತ್ರೆ ಉತ್ತರವಾಗಲಿದೆ.

ಪಾಯಿಂಟ್ 2: ಕಲ್ಯಾಣ ಕರ್ನಾಟಕ ಗೆಲ್ಲುವ ಟಾರ್ಗೆಟ್‌! – ಬಿಜೆಪಿಯ ಮುಂದಿನ ದೊಡ್ಡ ಸವಾಲು ಅಂದ್ರೆ ಅದು ಕಲ್ಯಾಣ ಕರ್ನಾಟಕ. ಈ ಭಾಗದಲ್ಲಿ ಕಾಂಗ್ರೆಸ್ ತನ್ನ ಹಿಡಿತ ಬಲಪಡಿಸಿಕೊಂಡಿದೆ. ಬಳ್ಳಾರಿ ಅಧಿಪತ್ಯ ಮರಳಿ ಪಡೆಯದಿದ್ದರೆ ಮುಂದಿನ ದಾರಿ ಕಠಿಣ ಎನ್ನುವುದನ್ನು ಅರಿತಿರುವ ಬಿಜೆಪಿ, ಈಗಲೇ ಅಡಿಪಾಯ ಹಾಕಲು ಮುಂದಾಗಿದೆ.

ಪಾಯಿಂಟ್ 3: ವಿಜಯೇಂದ್ರ ‘ತಾಕತ್ತು’ ಪ್ರದರ್ಶನ – ರಾಜ್ಯಾಧ್ಯಕ್ಷ ಪಟ್ಟ ಸಿಕ್ಕರೂ ವಿಜಯೇಂದ್ರ ಅವರಿಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತಲೇ ಇದೆ. ಹೀಗಾಗಿ ʻರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ತಾಕತ್ತು ನನಗೆ ಇದೆʼ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಲು ಮತ್ತು ತಮ್ಮ ಶಕ್ತಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡಲು ಇದು ವಿಜಯೇಂದ್ರ ಅವರಿಗೆ ಸಿಕ್ಕ ಸುವರ್ಣ ಅವಕಾಶ.

ಪಾಯಿಂಟ್ 4: ಕೇಸರಿ ಕ್ರಾಂತಿಯ ಹೊಸ ಅಲೆ – ಬಳ್ಳಾರಿಯಲ್ಲಿ ಒಂದು ಕಾಲದಲ್ಲಿ ಕೇಸರಿ ಅಲೆಯ ಅಬ್ಬರವಿತ್ತು. ಆದರೆ ಈಗ ಸನ್ನಿವೇಶ ಬದಲಾಗಿದೆ. ಅಲ್ಲಿ ಮತ್ತೆ ಕೇಸರಿ ಧ್ವಜವನ್ನು ಅತಿ ಎತ್ತರಕ್ಕೆ ಹಾರಿಸಲು ಬಿಜೆಪಿ ಹೊಸ ಕ್ರಾಂತಿ ಆರಂಭ ಮಾಡಿದೆ. ಈ ಯಾತ್ರೆ ಬಳ್ಳಾರಿ ಜನರ ಮನ ಗೆಲ್ಲಲು ರೂಪಿಸಿರುವ ದೊಡ್ಡ ಮಾಸ್ಟರ್ ಪ್ಲಾನ್.

ಪಾಯಿಂಟ್ 5: ನಾಗೇಂದ್ರ ಸವಾಲಿಗೆ ತಿರುಗೇಟು – ವಾಲ್ಮೀಕಿ ನಿಗಮದ ಹಗರಣದ ಬಳಿಕ ನಾಗೇಂದ್ರ ಅವರು ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದರು. ಆ ಸವಾಲನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ, ಬಳ್ಳಾರಿ ನೆಲದಲ್ಲೇ ನಿಂತು ನಾಗೇಂದ್ರ ಅವರಿಗೆ ಉತ್ತರ ನೀಡಲು ಸಿದ್ಧವಾಗಿದೆ.

ಆದರೆ, ಈ ಪಾದಯಾತ್ರೆಯ ನಡುವೆಯೇ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಸಂಚಲನ ಮೂಡಿಸಿದೆ. ಈ ಪಾದಯಾತ್ರೆಯನ್ನು ಅವರು ‘ಅಪ್ಪ-ಮಕ್ಕಳ ಪಾದಯಾತ್ರೆ’ ಹಾಗೂ ‘ಅಡ್ಜಸ್ಟ್ ಮೆಂಟ್ ಪಾದಯಾತ್ರೆ’ ಎಂದು ಕರೆದು ಲೇವಡಿ ಮಾಡಿದ್ದಾರೆ. ಉಳಿದ ನಾಯಕರಿಗೆ ಇದು ನಷ್ಟ ಎನ್ನುವುದು ಅವರ ವಾದ.

ಒಟ್ಟಿನಲ್ಲಿ ‘ಬಳ್ಳಾರಿ ಚಲೋ’ ಬಿಜೆಪಿಗೆ ಕೇವಲ ಹೋರಾಟವಲ್ಲ, ಅದು ಅಸ್ತಿತ್ವದ ಪ್ರಶ್ನೆ! ಈ ಪಾದಯಾತ್ರೆ ಯಶಸ್ವಿಯಾಗುತ್ತಾ? ವಿಜಯೇಂದ್ರ ಕೈ ಬಲಪಡಿಸುತ್ತಾ? ಕಾದು ನೋಡಬೇಕು.