ಸೆ.26, 27ಕ್ಕೆ AHO-ADH ಪರೀಕ್ಷೆ – ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಜತೆ ಕ್ಲ್ಯಾಶ್ – ಸಾವಿರಾರು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿ : ಅಶೋಕ್ ಮನವಿ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ನಡೆಯಲಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಮುಂದೂಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರ ಹಾಗೂ ಕೆಇಎಗೆ ಮನವಿ ಮಾಡಿದ್ದಾರೆ.
ಸುಮಾರು 8 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ತೋಟಗಾರಿಕೆ ಇಲಾಖೆಯ ನೇಮಕಾತಿ ಪರೀಕ್ಷೆಗಳು ನಿಗದಿಯಾಗಿದ್ದು, AHO ಹುದ್ದೆಯ ಪರೀಕ್ಷೆಯನ್ನು ಸೆಪ್ಟೆಂಬರ್ 26ರಂದು ಹಾಗೂ ADH ಮತ್ತು AHO ಹುದ್ದೆಗಳ ಪರೀಕ್ಷೆಯನ್ನು ಸೆಪ್ಟೆಂಬರ್ 27ರಂದು ನಡೆಸಲು KEA ವೇಳಾಪಟ್ಟಿ ಪ್ರಕಟಿಸಿದೆ.
ಆದರೆ ಇದೇ ಅವಧಿಯಲ್ಲಿ ನಡೆಯಲಿರುವ ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ದಿನಾಂಕಗಳು ಹೊಂದಿಕೆಯಾಗುತ್ತಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆರ್. ಅಶೋಕ್ ಹೇಳಿದ್ದಾರೆ. ವಿಶೇಷವಾಗಿ SBI Clerk ನೇಮಕಾತಿಯ ನಿಯಮಿತ ಹುದ್ದೆಗಳ ಪ್ರಾಥಮಿಕ ಪರೀಕ್ಷೆ ಸೆಪ್ಟೆಂಬರ್ 26ರಂದು ನಡೆಯುವ ವೇಳಾಪಟ್ಟಿ ಪ್ರಕಟವಾಗಿರುವುದರಿಂದ AHO ಪರೀಕ್ಷೆಯೊಂದಿಗೆ ದಿನಾಂಕದ ನೇರ ಘರ್ಷಣೆ ಉಂಟಾಗಿದೆ.
ಅನೇಕ ಉದ್ಯೋಗಾಕಾಂಕ್ಷಿಗಳು ಒಂದಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಒಂದೇ ದಿನ ಪರೀಕ್ಷೆಗಳು ನಿಗದಿಯಾಗಿರುವುದರಿಂದ ಒಂದು ಪರೀಕ್ಷೆಯನ್ನು ಅನಿವಾರ್ಯವಾಗಿ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ವರ್ಷಗಳ ಕಾಲ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ಮತ್ತಷ್ಟು ಸಂಕಷ್ಟ ಉಂಟುಮಾಡಬಹುದು ಎಂದು ಅಶೋಕ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವಿಯನ್ನು ಪರಿಗಣಿಸಿ ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ಘರ್ಷಣೆಯಾಗದಂತೆ AHO ಮತ್ತು ADH ಪರೀಕ್ಷೆಗಳಿಗೆ ಪರ್ಯಾಯ ದಿನಾಂಕ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರ KEA ಮತ್ತು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿದ್ದು, ಈ ಕುರಿತು ಸರ್ಕಾರ ಹಾಗೂ KEA ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
“ವರ್ಷಗಳ ಕಾಲ ಕಾದು, ಹಗಲಿರುಳು ಸಿದ್ಧತೆ ನಡೆಸಿರುವ ಯುವಜನತೆಗೆ ಒಂದು ಅವಕಾಶವೂ ಅನ್ಯಾಯವಾಗಿ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಬೇಕು” ಎಂಬುದು ಅವರ ಮನವಿಯಾಗಿದೆ.
ಸದ್ಯಕ್ಕೆ AHO ಮತ್ತು ADH ಪರೀಕ್ಷೆಗಳ ದಿನಾಂಕ ಬದಲಾವಣೆ ಕುರಿತು KEAಯಿಂದ ಅಧಿಕೃತ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ. ಆದ್ದರಿಂದ ಅಭ್ಯರ್ಥಿಗಳು KEAಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಅಗತ್ಯವಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.




















