SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ ಚಲೋ: 8ನೇ ದಿನವೂ ಭರ್ಜರಿ ಜನಬೆಂಬಲ

ಬಳ್ಳಾರಿ ಚಲೋ: 8ನೇ ದಿನವೂ ಭರ್ಜರಿ ಜನಬೆಂಬಲ

0
50

ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಎಂಟನೇ ದಿನವೂ ಭರ್ಜರಿ ಜನಬೆಂಬಲದೊಂದಿಗೆ ಮುಂದುವರಿಯಿತು. ಮಂಗಳವಾರ ಸಂಡೂರು ತಾಲ್ಲೂಕಿನ ಹಳೇ ದರೋಜಿಯಿಂದ ಕುಡುತಿನಿವರೆಗೆ ಸುಮಾರು 14 ಕಿ.ಮೀ. ಪಾದಯಾತ್ರೆ ನಡೆಯಿತು.

ಬೆಳಿಗ್ಗೆ 8ಕ್ಕೆ ಆರಂಭವಾದ ಯಾತ್ರೆ ತಿಮ್ಮಾಪುರ ಮಾರ್ಗವಾಗಿ ಸಾಗಿದ್ದು, ಸಂಜೆ 7ರ ಸುಮಾರಿಗೆ ಕುಡುತಿನಿ ತಲುಪಿತು. ಮಾರ್ಗಮಧ್ಯೆ ತಿಮ್ಮಾಪುರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಾರ್ವಜನಿಕರು ಅದ್ಧೂರಿ ಸ್ವಾಗತ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಬಿ. ಶ್ರೀರಾಮುಲು, ಮಹೇಶ್, ಅಶ್ವಥ್ ನಾರಾಯಣ್, ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಸೆ. 1ರಂದು ಲಿಂಗಸುಗೂರಿನಿಂದ ಆರಂಭವಾದ ‘ಬಳ್ಳಾರಿ ಚಲೋ’ ಇದೀಗ ಅಂತಿಮ ಹಂತ ತಲುಪಿದ್ದು, ಯಾತ್ರೆಗೆ ದಿನದಿಂದ ದಿನಕ್ಕೆ ಜನಬೆಂಬಲ ಹೆಚ್ಚುತ್ತಿದೆ. ಪಾದಯಾತ್ರೆಯುದ್ದಕ್ಕೂ ಜೆನ್‌ಝೀ ಯುವಕರೊಂದಿಗೆ ಸಂವಾದ ನಡೆಸಿದ ನಾಯಕರು, ವಿವಿಧ ವರ್ಗದ ಜನರ ಸಮಸ್ಯೆಗಳನ್ನು ಆಲಿಸಿದರು.

ಪೌರ ಕಾರ್ಮಿಕರೊಂದಿಗೆ ಸಂವಾದ: ಯಾತ್ರೆ ವೇಳೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರನ್ನು ವಿಜಯೇಂದ್ರ ಭೇಟಿ ಮಾಡಿ, ಅವರ ಕೆಲಸ, ಸಮಸ್ಯೆಗಳು ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಅವರ ಸೇವೆಯನ್ನು ಶ್ಲಾಘಿಸಿದರು.

ಅಲೆಮಾರಿ ಜನಾಂಗದವರ ಅಹವಾಲು: ಹಳೇ ದರೋಜಿಯಲ್ಲಿ ಅಲೆಮಾರಿ ಜನಾಂಗದವರ ಮನೆಗೆ ಭೇಟಿ ನೀಡಿದ ವಿಜಯೇಂದ್ರ, ಸಮುದಾಯದ ಮುಖಂಡರು ಹಾಗೂ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ವಸತಿ, ನಿವೇಶನ, ಮೂಲಸೌಕರ್ಯ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿ ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.