SK Home Ad
Home ಸುದ್ದಿ ರಾಜ್ಯ ಐಎನ್‌ಎಸ್ ಸಮರ್ಥಕ್ ಯುದ್ಧನೌಕೆ ಅ. 16ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆ

ಐಎನ್‌ಎಸ್ ಸಮರ್ಥಕ್ ಯುದ್ಧನೌಕೆ ಅ. 16ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆ

0
53

ದಾಂಡೇಲಿ: ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹುಉದ್ದೇಶದ ಯುದ್ಧನೌಕೆ ಐಎನ್‌ಎಸ್ ಸಮರ್ಥಕ್ ಅನ್ನು ಅಕ್ಟೋಬರ್ 16ರಂದು ಕಾರವಾರದ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುವುದು.

ಉಪರಾಷ್ಟ್ರಪತಿ ಚಂದ್ರಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಹಿರಿಯ ನೌಕಾಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು, ಗಣ್ಯರು ಹಾಗೂ ಎಲ್ ಅಂಡ್ ಟಿ ಕಂಪನಿಯ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತ ಸರ್ಕಾರದ ʻಮೇಕ್ ಇನ್ ಇಂಡಿಯಾʼ ಕಾರ್ಯಕ್ರಮದಡಿ, ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ಲಾರ್ಸನ್ ಅಂಡ್ ಟೂಬ್ರೊ (ಎಲ್ ಅಂಡ್ ಟಿ) ಸಂಸ್ಥೆಯು ಈ ಯುದ್ಧನೌಕೆಯನ್ನು ನಿರ್ಮಿಸಿದೆ.

ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ನಾಲ್ಕು ಬಹುಉದ್ದೇಶದ ನೌಕೆಗಳ ಪೈಕಿ ಐಎನ್‌ಎಸ್ ಸಮರ್ಥಕ್ ಮೊದಲನೆಯದಾಗಿದೆ. ಇದರ ಸೇರ್ಪಡೆಯು ದೇಶದ ರಕ್ಷಣಾ ಸ್ವಾವಲಂಬನೆಯ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

ಸಮುದ್ರ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಗಳಿಗಾಗಿ ಪ್ರಮುಖವಾಗಿ ವಿನ್ಯಾಸಗೊಳಿಸಲಾದ ಐಎನ್‌ಎಸ್ ಸಮರ್ಥಕ್, ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು, ಗುರಿ ನಿಯೋಜನೆ, ವಿವಿಧ ವ್ಯವಸ್ಥೆಗಳ ಪರೀಕ್ಷೆ ಹಾಗೂ ಮಾನವ ರಹಿತ ಮತ್ತು ಸ್ವಾಯತ್ತ ವ್ಯವಸ್ಥೆಗಳಿಗೆ ತಾಯಿನೌಕೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಮಾನವೀಯ ನೆರವು, ವಿಪತ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆ, ಮುಳುಗಿದ ವಸ್ತುಗಳ ಪತ್ತೆ ಮತ್ತು ರಕ್ಷಣಾ ಕಾರ್ಯಗಳು ಹಾಗೂ ಆಸ್ಪತ್ರೆ ನೌಕೆಯಾಗಿ ಸೇವೆ ಸಲ್ಲಿಸುವ ಸಾಮರ್ಥ್ಯವೂ ಇದೆ. ಸವಾಲಿನ ಸಮುದ್ರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ವದೇಶಿ ಸಂವೇದಕಗಳು, ಶಸ್ತ್ರಾಸ್ತ್ರಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಈ ನೌಕೆಯಲ್ಲಿ ಅಳವಡಿಸಲಾಗಿದೆ.

100 ಮೀಟರ್‌ಗಿಂತಲೂ ಹೆಚ್ಚು ಉದ್ದವಿರುವ ಈ ನೌಕೆಯು ಸುಮಾರು 5,000 ಟನ್ ತೂಕವನ್ನು ಹೊಂದಿದೆ. 7,200 ನಾಟಿಕಲ್ ಮೈಲುಗಳಿಗಿಂತಲೂ ಅಧಿಕ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಇದು, ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಬಹುಉದ್ದೇಶದ ಮತ್ತು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿಯಾದ ಈ ನೌಕೆಯ ಸೇರ್ಪಡೆಯಿಂದ, ವಿಧ್ವಂಸಕ ನೌಕೆಗಳು, ಯುದ್ಧನೌಕೆಗಳು ಹಾಗೂ ವಿಮಾನವಾಹಕ ನೌಕೆಗಳಂತಹ ಪ್ರಮುಖ ಸಮರ ನೌಕೆಗಳನ್ನು ಅವುಗಳ ಮುಖ್ಯ ಕಾರ್ಯಾಚರಣೆಗಳಿಗೆ ಬಳಸಲು ಹೆಚ್ಚಿನ ಅವಕಾಶ ದೊರೆಯಲಿದೆ. ಗುರಿ ನಿಯೋಜನೆ, ಸಿಬ್ಬಂದಿ ತರಬೇತಿ, ಸಮುದ್ರ ಕಣ್ಗಾವಲು ಮತ್ತು ಸರಕು ಸಾಗಣೆ ಹಾಗೂ ಅಗತ್ಯ ನೆರವು ಒದಗಿಸುವ ಕಾರ್ಯಗಳಲ್ಲಿಯೂ ಐಎನ್‌ಎಸ್ ಸಮರ್ಥಕ್ ಪ್ರಮುಖ ಪಾತ್ರ ವಹಿಸಲಿದೆ.

ಐಎನ್‌ಎಸ್ ಸಮರ್ಥಕ್‌ನ ಲಾಂಛನದಲ್ಲಿ ಆಕ್ರಮಣಕಾರಿ ಭಂಗಿಯಲ್ಲಿರುವ ಭಾರತೀಯ ಆನೆಯ ಚಿತ್ರವಿದ್ದು, ಇದು ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ. ಈ ನೌಕೆಯ ಸಿಬ್ಬಂದಿಯನ್ನು ʻಪ್ರಚಂಡ ಪುಂಡರೀಕರುʼ ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಷ್ಟದಿಗ್ಗಜಗಳಲ್ಲಿ ಪುಂಡರೀಕನೂ ಒಬ್ಬನಾಗಿದ್ದು, ದಕ್ಷಿಣ-ಪೂರ್ವ ದಿಕ್ಕಿನ ರಕ್ಷಕನೆಂದು ಪರಿಗಣಿಸಲಾಗಿದೆ.

ಯಾವುದೇ ಕಾರ್ಯವನ್ನು ಯಾವುದೇ ಸಮಯದಲ್ಲಿ ನಿರ್ವಹಿಸಲು ಸಿದ್ಧವಾಗಿರುವುದು ಮತ್ತು ತುರ್ತು ಸಂದರ್ಭಗಳಲ್ಲಿ ಮೊದಲು ಸ್ಪಂದಿಸುವ ಸಾಮರ್ಥ್ಯವನ್ನು ಹೊಂದಿರುವುದು ಈ ನೌಕೆಯ ಪ್ರಮುಖ ವೈಶಿಷ್ಟವಾಗಿದೆ ಎಂದು ನೌಕಾಪಡೆಯ ತಿಳಿಸಿದೆ.