SK Home Ad
Home ಸುದ್ದಿ ರಾಜ್ಯ ರೇಷನ್‌ ಅಕ್ಕಿ ಬದಲು ಸಿರಿಧಾನ್ಯಗಳ ಕಿಟ್ ವಿತರಣೆಗೆ ಸರ್ಕಾರ ಸಿದ್ಧತೆ

ರೇಷನ್‌ ಅಕ್ಕಿ ಬದಲು ಸಿರಿಧಾನ್ಯಗಳ ಕಿಟ್ ವಿತರಣೆಗೆ ಸರ್ಕಾರ ಸಿದ್ಧತೆ

0
28

ಬೆಂಗಳೂರು: ರಾಜ್ಯದಲ್ಲಿ ಪಡಿತರ ಅಕ್ಕಿಯ ಬದಲು ಪೌಷ್ಟಿಕ ಆಹಾರ ಧಾನ್ಯಗಳ ಕಿಟ್ ವಿತರಣೆಯನ್ನು ಶೀಘ್ರದಲ್ಲೇ ಆರಂಭ ಮಾಡಲಾಗುವುದು ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭತ್ತ ಬೆಳೆಯುವ ಪ್ರದೇಶಗಳಲ್ಲಿ ಪಡಿತರ ಅಕ್ಕಿಯ ಬಳಕೆ ಕಡಿಮೆ ಇರುವುದನ್ನು ಗಮನಿಸಿ, ಜನರ ಆರೋಗ್ಯ ಮತ್ತು ಪೌಷ್ಟಿಕತೆಯ ದೃಷ್ಟಿಯಿಂದ ಅಕ್ಕಿಯ ಬದಲಿಗೆ ವಿವಿಧ ಆಹಾರ ಧಾನ್ಯಗಳ ಕಿಟ್ ವಿತರಿಸುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಆಹಾರ ಧಾನ್ಯಗಳ ಕಿಟ್ ವಿತರಣೆ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಈ ಕಿಟ್‌ನಲ್ಲಿ ಯಾವ ಭಾಗಕ್ಕೆ ಯಾವ ಪದಾರ್ಥ ವಿತರಣೆ ಮಾಡಬೇಕು ಎಂಬುದನ್ನು ನಿರ್ಧರಿಸಿ ವಿತರಿಸಲಾಗುತ್ತದೆ ಎಂದರು.

ಇ-ಕೆವೈಸಿ ಮತ್ತು `ಅನ್ನ ಸೇವೆ’ ಆಪ್ ಸೌಲಭ್ಯ ಬಹುತೇಕ ಜಿಲ್ಲೆಗಳಲ್ಲಿ ಯಶ ಕಂಡಿದೆ. ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳು ಮತ್ತು ಹೊರರಾಜ್ಯಗಳಿಗೆ ಹೋಗಿರುವ ಜನರು, ಇ-ಕೆವೈಸಿಗಾಗಿ ಕೆಲಸ ಬಿಟ್ಟು ಸ್ವಂತ ಊರಿಗೆ ಬರುವ ತೊಂದರೆ ತಪ್ಪಿಸಲು ʻಅನ್ನ ಸೇವೆʼ ಮೊಬೈಲ್ ಆಪ್ ಮೂಲಕ ಇರುವ ಸ್ಥಳದಿಂದಲೇ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಜನರು ಈ ಸೌಲಭ್ಯದ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಗೆ ಸಾಗಿಸುವ ಜಾಲದ ವಿರುದ್ಧ ಕಠಿಣ ಕ್ರಮ ಮುಂದುವರೆದಿದೆ. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ 5,000 ಟನ್ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು, 415 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ, 285 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.