SK Home Ad
Home ಕೃಷಿ/ವಾಣಿಜ್ಯ ಭಾರತದ ಅತಿ ದೊಡ್ಡ ಐಪಿಒ ಆಗುವ ಮುಂಚೆ ಜಿಯೋದ ಮುಂದಿನ ಮಾರ್ಗನಕ್ಷೆ ಅನಾವರಣ

ಭಾರತದ ಅತಿ ದೊಡ್ಡ ಐಪಿಒ ಆಗುವ ಮುಂಚೆ ಜಿಯೋದ ಮುಂದಿನ ಮಾರ್ಗನಕ್ಷೆ ಅನಾವರಣ

0
68

ಮುಂಬೈ: ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒಗೂ ಮುನ್ನ ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಮುಂದಿನ ಹಂತದ ಬೆಳವಣಿಗೆಯ ಮಾರ್ಗನಕ್ಷೆ (ರೋಡ್‌ಮ್ಯಾಪ್) ಅನ್ನು ಬಹಿರಂಗಪಡಿಸಿದೆ.

ಮುಂಬೈನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ, ಮೊಬಿಲಿಟಿ, ಹೋಮ್ ಮತ್ತು ಎಂಟರ್‌ಪ್ರೈಸ್-ಇಂಟರ್‌ನ್ಯಾಷನಲ್ ಅನ್ನು ಕಂಪನಿಯ ಮೂರು ಪ್ರಮುಖ ಬೆಳವಣಿಗೆ (ಗ್ರೋತ್) ಇಂಜಿನ್‌ಗಳೆಂದು ಘೋಷಿಸಿದ್ದಾರೆ. ತಂತ್ರಜ್ಞಾನ, ಡಿಜಿಟಲ್ ಗೇಟ್‌ವೇ ಮತ್ತು ಬಲವಾದ ಮೂಲಸೌಕರ್ಯದ ಆಧಾರದ ಮೇಲೆ, ಹಣಕಾಸು ವರ್ಷ (FY)31 ರ ವೇಳೆಗೆ ಭಾರತದ ಅಂದಾಜು 1.4 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯಲ್ಲಿ ಕಂಪನಿಯು ದೊಡ್ಡ ಪಾತ್ರವನ್ನು ವಹಿಸಲಿದೆ ಎಂದು ನಂಬಲಾಗಿದೆ.

“ನಮ್ಮ ವ್ಯವಹಾರದ ಅತ್ಯಂತ ಪ್ರಮುಖ ಘಟಕ ನಮ್ಮ ಗ್ರಾಹಕ” ಎಂದು ಆಕಾಶ್ ಅಂಬಾನಿ ಹೇಳಿದರು. ಪ್ರತಿ ಭಾರತೀಯ, ಪ್ರತಿ ಮನೆ ಮತ್ತು ಪ್ರತಿ ಉದ್ಯಮಕ್ಕೂ ಉತ್ತಮ ಹಾಗೂ ಕೈಗೆಟುಕುವ ಡಿಜಿಟಲ್ ಸೇವೆಗಳನ್ನು ಒದಗಿಸುವುದೇ ಜಿಯೋದ ಮುಖ್ಯ ಗುರಿಯಾಗಿದೆ ಎಂದರು. ಜಿಯೋ ಪ್ರಸ್ತುತ ಸುಮಾರು 53.3 ಕೋಟಿ ಕನೆಕ್ಟಿವಿಟಿ ಗ್ರಾಹಕರನ್ನು ಹೊಂದಿದ್ದು, ಭಾರತದ ಶೇಕಡಾ 60ಕ್ಕಿಂತ ಹೆಚ್ಚು ಡೇಟಾ ಟ್ರಾಫಿಕ್ ಅನ್ನು ನಿರ್ವಹಿಸುತ್ತಿದೆ.

ಮೊಬಿಲಿಟಿ ವಿಭಾಗದಲ್ಲಿ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಸುಮಾರು 34 ಕೋಟಿ ಹೊಸ 4G ಮತ್ತು 5G ಗ್ರಾಹಕರ ಮಾರುಕಟ್ಟೆಯನ್ನು ಕಾಣುತ್ತಿದೆ. ಆಕಾಶ್ ಅವರ ಪ್ರಕಾರ, ಇದರಲ್ಲಿ ಸುಮಾರು 10 ಕೋಟಿ ಗ್ರಾಹಕರು ಮೊದಲ ಬಾರಿಗೆ ಮೊಬೈಲ್ ಸಂಪರ್ಕ ಪಡೆದುಕೊಳ್ಳುವವರಾಗಿದ್ದರೆ, ಸುಮಾರು 24 ಕೋಟಿ ಗ್ರಾಹಕರು 2G ಯಿಂದ 4G ಮತ್ತು 5G ಗೆ ಅಪ್‌ಗ್ರೇಡ್ ಆಗಲಿದ್ದಾರೆ. ಹಣಕಾಸು ವರ್ಷ (FY)26 ರಲ್ಲಿ ಜಿಯೋದ ನಿವ್ವಳ ಸಕ್ರಿಯ ಮೊಬೈಲ್ ಗ್ರಾಹಕರ ಸಂಖ್ಯೆಯು ಎರಡನೇ ಸ್ಥಾನದಲ್ಲಿರುವ ಆಪರೇಟರ್‌ಗಿಂತ ಸುಮಾರು ಮೂರು ಪಟ್ಟು ವೇಗವಾಗಿ ಬೆಳವಣಿಗೆ ಕಂಡಿದೆ.

ಹೋಮ್ ಬ್ರಾಡ್‌ಬ್ಯಾಂಡ್ ಅನ್ನು ಕಂಪನಿಯು ಮುಂಬರುವ ವರ್ಷಗಳ ಪ್ರಮುಖ ಗ್ರೋತ್ ಇಂಜಿನ್ ಎಂದು ಪರಿಗಣಿಸಿದೆ. ಜಿಯೋ ಪ್ರಸ್ತುತ ಸುಮಾರು 2.86 ಕೋಟಿ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಗ್ರಾಹಕರನ್ನು ಹೊಂದಿದ್ದು, ಈ ನೆಲೆಯನ್ನು ಮುಂದಿನ ದಿನಗಳಲ್ಲಿ 10 ಕೋಟಿ ಮನೆಗಳಿಗೆ ವಿಸ್ತರಿಸಲು ಬಯಸಿದೆ. ಹಣಕಾಸು ವರ್ಷ (FY) 26ರಲ್ಲಿ ದೇಶದಲ್ಲಿ ಸೇರ್ಪಡೆಗೊಂಡ ಒಟ್ಟು ಹೊಸ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳಲ್ಲಿ ಸುಮಾರು ಶೇಕಡಾ 67.5 ರಷ್ಟು ಪಾಲು ಜಿಯೋಗೆ ಸೇರಿದೆ. ಕಂಪನಿಯು ಫೈಬರ್ ಜೊತೆಗೆ ವೈರ್‌ಲೆಸ್ ತಂತ್ರಜ್ಞಾನದ ಮೂಲಕ ದೇಶದ 19,000 ಪಿನ್ ಕೋಡ್‌ಗಳಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ ಎಂದು ಆಕಾಶ್ ತಿಳಿಸಿದರು.

ಮೂರನೇ ಗ್ರೋತ್ ಇಂಜಿನ್ ಎಂಟರ್‌ಪ್ರೈಸ್ ಮತ್ತು ಅಂತಾರಾಷ್ಟ್ರೀಯ ವ್ಯವಹಾರವಾಗಿದೆ. ಭಾರತದಲ್ಲಿ ಎಂಟರ್‌ಪ್ರೈಸ್ ಡಿಜಿಟಲ್ ಸೇವೆಗಳ ಮಾರುಕಟ್ಟೆಯು ಸುಮಾರು ₹5.1 ಲಕ್ಷ ಕೋಟಿ ಅಂದರೆ 56.8 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಜಿಯೋ ಅಂದಾಜಿಸಿದೆ. ಆಕಾಶ್ ಅವರ ಪ್ರಕಾರ, ದೇಶದ ಸುಮಾರು ಶೇಕಡಾ 65 ರಷ್ಟು ಬ್ಯಾಂಕ್ ಶಾಖೆಗಳು ಜಿಯೋ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿವೆ.

ಜಿಯೋ ತಾನು ಅಭಿವೃದ್ಧಿಪಡಿಸಿರುವ ಎಂಡ್-ಟು-ಎಂಡ್ ತಂತ್ರಜ್ಞಾನ ಸ್ಟಾಕ್ ಅನ್ನು ಆಯ್ದ ವಿದೇಶಿ ಮಾರುಕಟ್ಟೆಗಳಿಗೂ ವಿಸ್ತರಿಸಲು ಬಯಸಿದೆ. ಕೇವಲ ಸಾಫ್ಟ್‌ವೇರ್ ಮಾರಾಟ ಮಾಡುವುದು ಮಾತ್ರವಲ್ಲದೆ, ಜಾಗತಿಕ ಟೆಲಿಕಾಂ ಕಂಪನಿಗಳೊಂದಿಗೆ ಮ್ಯಾನೇಜ್ಡ್ ಸರ್ವೀಸ್ ಪಾರ್ಟನರ್ ಆಗಿ ಕಾರ್ಯ ನಿರ್ವಹಿಸುವುದು ಕಂಪನಿಯ ಯೋಜನೆಯಾಗಿದೆ. ಇದರ ಮೂಲಕ ಭಾರತವು ತಂತ್ರಜ್ಞಾನ ಆಮದುದಾರನಿಂದ ತಂತ್ರಜ್ಞಾನ ರಫ್ತುದಾರನಾಗುವ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದು ಆಕಾಶ್ ಹೇಳಿದರು.

ಇದಕ್ಕೂ ಮುನ್ನ ಇಶಾ ಅಂಬಾನಿ ಅವರು ಜಿಯೋದ ಆರಂಭ ಹಾಗೂ ರಿಲಯನ್ಸ್‌ನ ವ್ಯಾಪಾರ ಚಿಂತನೆಯನ್ನು ಸ್ಮರಿಸುತ್ತಾ, ಕಂಪನಿಯು ದೀರ್ಘಕಾಲೀನ ದೃಷ್ಟಿಕೋನ, ಬೃಹತ್ ಪ್ರಮಾಣ, ಬಲವಾದ ಅನುಷ್ಠಾನ ಮತ್ತು ಆರ್ಥಿಕ ಶಿಸ್ತಿನಲ್ಲಿ ನಂಬಿಕೆ ಹೊಂದಿದೆ ಎಂದು ತಿಳಿಸಿದರು.

ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಹಾಗೂ 1977ರ ರಿಲಯನ್ಸ್ ಐಪಿಒ ಅನ್ನು ಪತ್ರಿಕಾಗೋಷ್ಠಿಯ ಆರಂಭದಲ್ಲಿ ಉದಯ್ ಕೋಟಕ್ ಅವರು ನೆನಪಿಸಿಕೊಂಡರು.