SK Home Ad
Home ಸುದ್ದಿ ರಾಜ್ಯ ಜೋಶಿ ದರ ನಿಗದಿಯ ಮಾತು ಕೊಟ್ಟರೆ ಹೋರಾಟ ವಾಪಸ್‌

ಜೋಶಿ ದರ ನಿಗದಿಯ ಮಾತು ಕೊಟ್ಟರೆ ಹೋರಾಟ ವಾಪಸ್‌

0
37

ಬೆಳಗಾವಿ: ನಾವು ಭಯೋತ್ಪಾದಕರಲ್ಲ; ಕೋಟ್ಯಂತರ ಜನರಿಗೆ ಅನ್ನ ನೀಡುವ ಅನ್ನದಾತರು. ನಮ್ಮನ್ನು ತಡೆಯಲು ಬ್ಯಾರಿಕೇಡ್ ಹಾಕುವ ಬದಲು, ನಮ್ಮೊಂದಿಗೆ ಮಾತನಾಡಿ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸುವ ಹೊಣೆಗಾರಿಕೆ ನಿಮ್ಮದು ಎಂದು ಮಾತು ಕೊಡಿ ಎಂದು ಶಶಿಕಾಂತ ಗುರೂಜಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಒತ್ತಾಯಿಸಿದರು.

ಹತ್ತರಗಿ ಟೋಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಆಕ್ರೋಶ ತೀವ್ರವಾಗಿದೆ. ರಾಜಕಾರಣವನ್ನು ಬದಿಗಿಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾಧ್ಯವಾದರೆ ಪ್ರತಿಭಟನಾ ಸ್ಥಳಕ್ಕೆ ಬನ್ನಿ. ಇಲ್ಲವಾದರೆ ನಿಮ್ಮ ಪ್ರತಿನಿಧಿಯನ್ನು ಕಳುಹಿಸಿ. ದೂರವಾಣಿ ಮೂಲಕವಾದರೂ ಮಾತನಾಡಿ; ಸ್ಪೀಕರ್ ಹಾಕಿ ರೈತರೆಲ್ಲರೂ ನಿಮ್ಮ ಮಾತು ಕೇಳುವ ವ್ಯವಸ್ಥೆ ಮಾಡುತ್ತೇವೆ. ರೈತ ಮುಖಂಡರಿಗೆ ಸ್ಪಷ್ಟ ಭರವಸೆ ನೀಡಿ ಎಂದು ಮನವಿ ಮಾಡಿದರು.

ಕಬ್ಬಿಗೆ ರೈತರು ಕೇಳುತ್ತಿರುವ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಸಚಿವರು ಮಾಧ್ಯಮಗಳ ಮೂಲಕ ಮಾತು ನೀಡಿದರೆ ಹೋರಾಟ ಹಿಂಪಡೆಯುವುದಾಗಿ ಹೇಳಿದರು.

ಮನೆಗೆ ಗೋಡೆ ಕಟ್ಟಿಕೊಂಡರೆ ಪರಿಹಾರವೇ?: ಜೋಶಿ ಅವರ ಮನೆ ಮುಂದೆ ಬ್ಯಾರಿಕೇಡ್ ಹಾಕಿರುವ ದೃಶ್ಯವನ್ನು ಬೆಳಿಗ್ಗೆ ದೂರದರ್ಶನದಲ್ಲಿ ನೋಡಿದ್ದಾಗಿ ಹೇಳಿದ ಗುರೂಜಿ, ಆ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾರಿಕೇಡ್ ಹಾಕುವ ಬದಲು ಸಿಮೆಂಟಿನ ಗೋಡೆಯನ್ನೇ ಕಟ್ಟಿಕೊಂಡು ಬಿಡಿ; ಹೆಲಿಕಾಪ್ಟರ್‌ನಲ್ಲಿ ಇಳಿಯಿರಿ ಎಂದು ವ್ಯಂಗ್ಯವಾಡಿದ ಅವರು, ನಿಮ್ಮಂತ ಲಕ್ಷಾಂತರ ಮಂದಿಗೆ ಅನ್ನ ನೀಡುವ ರೈತರು ನಾವು. ನಮ್ಮ ಬೇಡಿಕೆಗೆ ಸ್ಪಂದಿಸಿ ಎಂದು ಒತ್ತಾಯಿಸಿದರು.

ಸ್ಪಷ್ಟ ಭರವಸೆ ದೊರೆಯದಿದ್ದರೆ ಹೋರಾಟ ಹುಬ್ಬಳ್ಳಿಗೆ ಸಾಗಬಹುದು, ಸಚಿವರ ಮನೆ ಮುಂದೆಯೂ ಮುಂದುವರಿಯಬಹುದು. ರಾಜ್ಯವ್ಯಾಪಿ ಬಂದ್ ರೂಪ ಪಡೆಯಬಹುದು ಎಂದು ಎಚ್ಚರಿಸಿದರು.