Home Advertisement
Home ನಮ್ಮ ಜಿಲ್ಲೆ ಮೈಸೂರು ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ

ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ

0
13

ಪಿರಿಯಾಪಟ್ಟಣ: ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ. ಜನ ನಮ್ಮ ಪರವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಖಡಕ್ ಉತ್ತರ ನೀಡಿದರು.

ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಪಿರಿಯಾಪಟ್ಟಣದ ಪಾರೆಕೊಪ್ಪಲಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಸ್ಥಾನ ನಿರ್ಮಾಣ, ಒಕ್ಕಲಿಗ ಸಂಘದ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಕುವೆಂಪು ಭವನ ಹಾಗೂ ಬೆಟ್ಟದ ಪುರ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿದ್ದು ಈ ಬಾರಿಯ ಆಯವ್ಯಯದಲ್ಲಿ ಸುಮಾರು 82 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿರಿಸಿದೆ ಎಂದರು.

ವಿಶ್ವಮಾನವ ಕುವೆಂಪು ಆಶಯ ನಮ್ಮದು: ಕುವೆಂಪು ಅವರು ವಿಶ್ವಮಾನವರಾಗುವ ಪ್ರಯತ್ನವನ್ನು ಮಾಡಿದ್ದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕು ಎಂದು ಬಯಸಿದ್ದರು. ಎಲ್ಲರೂ ಮನುಷ್ಯರಾಗಿ ಬಾಳಬೇಕೆನ್ನುವ ಆಶಯವನ್ನು ಹೊಂದಿದ್ದ ಕುವೆಂಪು ಅವರ ಭವನ ಇಲ್ಲಿ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ ಎಂದರು.

50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ: ಬೆಟ್ಟದಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.

ನುಡಿದಂತೆ ನಡೆಯುವ ಸರ್ಕಾರ ನಮ್ಮದು: ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಮುಂದೆಯೂ ಈ ಯೋಜನೆಗಳನ್ನು ಮುಂದುವರೆಸಲಾಗುವುದು. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ವಿರೋಧ ಪಕ್ಷ ಪ್ರಸ್ತುತ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿಗೂ ಹಣವನ್ನು ಮೀಸಲಿರಿಸಿದೆ ಎನ್ನಲು ಇಂದು ಶಂಕುಸ್ಥಾಪನೆಯಾಗಿರುವ 419.78 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ ಎಂದರು.

ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿವೆ: ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿದ್ದು ಅದರಲ್ಲಿ ಸತ್ಯಾಂಶವಿಲ್ಲ. ಟೀಕೆಗಳು ವಾಸ್ತವದ ನೆಲೆಗಟ್ಟಿನಲ್ಲಿರಬೇಕು. ಸುಳ್ಳು ಹೇಳುವುದನ್ನೇ ಕಸಬು ಮಾಡಿಕೊಳ್ಳದೆ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾತನಾಡಬೇಕು. ಅವರು ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಏನು ಮಾಡಿದ್ದಾರೆಂದು ಜನರ ಮುಂದಿಡಬೇಕು. ನಾವು ಅಭಿವೃದ್ಧಿ ಕಾರ್ಯಗಳ ಮೂಲಕವೇ ಬಿಜೆಪಿಯ ಅಪಪ್ರಚಾರಕ್ಕೆ ಉತ್ತರ ಕೊಡುತ್ತಿದ್ದೇವೆ ಎಂದರು.