SK Home Ad
Home ಸುದ್ದಿ ರಾಜ್ಯ ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ ಅನಾವರಣ

ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ ಅನಾವರಣ

0
55
10 ಅಡಿ ಎತ್ತರದ ಏಕಶಿಲಾ ಗ್ರಾನೈಟ್‌ ಸ್ಮಾರಕ; ಗಾಂಧೀಜಿ ಸ್ಮರಣೆಗೆ ಕರ್ನಾಟಕದ ವಿಶೇಷ ಹೆಜ್ಜೆ

ಬೆಂಗಳೂರು: ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ್ದ 87 ಐತಿಹಾಸಿಕ ಸ್ಥಳಗಳಲ್ಲಿ ‘ಗಾಂಧಿ ಸ್ಮಾರಕ ಸ್ತಂಭ’ಗಳನ್ನು ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆಯ ಭಾಗವಾಗಿ, ರಾಜ್ಯದ ಮೊದಲ ಸ್ಮಾರಕ ಸ್ತಂಭವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು (GAS ಕಾಲೇಜು) ಆವರಣದಲ್ಲಿ ಅನಾವರಣಗೊಳಿಸಿದರು.

1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರೂಪಿಸಲಾದ ‘ಗಾಂಧಿ ಭಾರತ’ ಅಭಿಯಾನದಡಿ ಈ ಸ್ಮಾರಕ ಸ್ತಂಭಗಳನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸುತ್ತಿದೆ. ಗಾಂಧೀಜಿಯವರ ಕರ್ನಾಟಕ ಪ್ರವಾಸ, ಸ್ವಾತಂತ್ರ್ಯ ಚಳವಳಿಯೊಂದಿಗಿನ ರಾಜ್ಯದ ಐತಿಹಾಸಿಕ ನಂಟು ಹಾಗೂ ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಮಹಾತ್ಮ ಗಾಂಧೀಜಿಯವರ 1915ರ ಬೆಂಗಳೂರಿನ ಐತಿಹಾಸಿಕ ಭೇಟಿ

ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಸ್ಮಾರಕ ಸ್ತಂಭ ನಿರ್ಮಾಣಕ್ಕೆ ವಿಶೇಷ ಐತಿಹಾಸಿಕ ಹಿನ್ನೆಲೆಯಿದೆ. ಮಹಾತ್ಮ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ 1915ರ ಮೇ 8ರಂದು ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇಂದಿನ ಸರ್ಕಾರಿ ಕಲಾ ಕಾಲೇಜಾಗಿರುವ ಅಂದಿನ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು.

ಈ ಐತಿಹಾಸಿಕ ಭೇಟಿಯ ನೆನಪಿಗಾಗಿ ಕಾಲೇಜಿನ ಸಭಾಂಗಣಕ್ಕೆ ‘ಬಾಪೂಜಿ’ ಎಂಬ ಹೆಸರನ್ನು ನೀಡಲಾಗಿದ್ದು, ಇದೀಗ ಇದೇ ಆವರಣದಲ್ಲಿ ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭ ನಿರ್ಮಾಣವಾಗಿದೆ.

10 ಅಡಿ ಎತ್ತರದ ಏಕಶಿಲಾ ಗ್ರಾನೈಟ್ ಕಲಾಕೃತಿ : ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸ್ಮಾರಕ ಸ್ತಂಭದ ಕಲಾಕೃತಿಯನ್ನು ಸಿದ್ಧಪಡಿಸಿದ್ದಾರೆ. ಸುಮಾರು 10 ಅಡಿ ಎತ್ತರ ಹಾಗೂ 3¼ ಅಡಿ ಅಗಲದ ಏಕಶಿಲಾ ಗ್ರಾನೈಟ್‌ನಿಂದ ಸ್ಮಾರಕವನ್ನು ರೂಪಿಸಲಾಗಿದೆ.

ಆಕರ್ಷಕ ಸ್ಮಾರಕ ಸ್ತಂಭದ ವಿವರ:

​ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ಸ್ಮಾರಕದ ಆಕರ್ಷಕ ಕಲಾಕೃತಿಯನ್ನು ಸಿದ್ಧಪಡಿಸಿದ್ದು, ಸ್ಮಾರಕವು 10 ಅಡಿ ಎತ್ತರ ಹಾಗೂ 3 1/4 (ಮೂರು ಕಾಲು) ಅಡಿ ಅಗಲದ ಏಕಶಿಲಾ ಗ್ರಾನೈಟ್ ಕಲಾಕೃತಿ ಹೊಂದಿದೆ.

ಸ್ತಂಭದ ಮೇಲ್ಭಾಗದಲ್ಲಿ ನಾಲ್ಕು ಸಿಂಹಗಳನ್ನೊಳಗೊಂಡ ರಾಷ್ಟ್ರೀಯ ಲಾಂಛನ, ಅದರ ಕೆಳಗೆ ಅಶೋಕ ಚಕ್ರ, ಧ್ಯಾನಸ್ಥ ಭಂಗಿಯಲ್ಲಿರುವ ಮಹಾತ್ಮ ಗಾಂಧೀಜಿ, ಗಾಂಧೀಜಿಯವರು ಪ್ರತಿಪಾದಿಸಿದ ‘ಸಪ್ತ ಸಾಮಾಜಿಕ ಪಾತಕಗಳು’, ಅವರ ಸಹಿ ಹಾಗೂ ಚರಕದ ಚಿತ್ರಣವನ್ನು ಅಳವಡಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್. ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಮಾರಕ ಸ್ತಂಭ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಲ್ಪಿ ಅರುಣ್ ಯೋಗಿರಾಜ್, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ನಾಗೇಂದ್ರ ಕುಮಾರ್ ಜಿ.ಸಿ. ಹಾಗೂ ನಿರ್ಮಿತಿ ಕೇಂದ್ರದ ಅಭಿಯಂತರ ರಾಜೀವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆದರು.

ಇದೇ ವೇಳೆ ಬೆಂಗಳೂರಿನ ಗಾಂಧಿ ಭವನದಲ್ಲೂ ಗಾಂಧೀಜಿಯವರ ಜೀವನ ಮತ್ತು ಕಾರ್ಯಗಳನ್ನು ಪರಿಚಯಿಸುವ ‘ಮಹಾತ್ಮನ ಪಯಣ’ ಎಂಬ ಡಿಜಿಟಲ್ ಮ್ಯೂಸಿಯಂ ಉದ್ಘಾಟನೆಯಾಗುತ್ತಿದೆ. ಛಾಯಾಚಿತ್ರಗಳು, ದಾಖಲೆಗಳು ಹಾಗೂ QR ಆಧಾರಿತ ಡಿಜಿಟಲ್ ತಂತ್ರಜ್ಞಾನದ ಮೂಲಕ ಗಾಂಧೀಜಿಯವರ ಜೀವನದ ವಿವಿಧ ಹಂತಗಳನ್ನು ಪರಿಚಯಿಸುವ ವ್ಯವಸ್ಥೆಯನ್ನು ಇಲ್ಲಿ ರೂಪಿಸಲಾಗಿದೆ.

ಹೀಗಾಗಿ ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಒಂದೆಡೆ ಐತಿಹಾಸಿಕ ಸ್ಥಳದ ಸ್ಮರಣಾರ್ಥ ಸ್ಮಾರಕ ಸ್ತಂಭ ಅನಾವರಣಗೊಂಡಿದ್ದರೆ, ಮತ್ತೊಂದೆಡೆ ಗಾಂಧೀಜಿಯವರ ಜೀವನವನ್ನು ಡಿಜಿಟಲ್ ರೂಪದಲ್ಲಿ ಪರಿಚಯಿಸುವ ಮ್ಯೂಸಿಯಂ ಆರಂಭವಾಗುತ್ತಿರುವುದು ಗಮನ ಸೆಳೆದಿದೆ.