SK Home Ad
Home ಸುದ್ದಿ ರಾಜ್ಯ ಆತ್ಮಸಾಕ್ಷಿಗೆ ಅನುಗುಣವಾಗಿ ಮತ:GTD ಹೇಳಿಕೆಗೆ ರಾಜಕೀಯ ಸಂಚಲನ

ಆತ್ಮಸಾಕ್ಷಿಗೆ ಅನುಗುಣವಾಗಿ ಮತ:GTD ಹೇಳಿಕೆಗೆ ರಾಜಕೀಯ ಸಂಚಲನ

0
99

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಆರೋಪಗಳು ಮತ್ತು ರಾಜಕೀಯ ಲೆಕ್ಕಾಚಾರಗಳು ತೀವ್ರಗೊಂಡಿರುವ ನಡುವೆಯೇ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (ಜಿಟಿಡಿ) ಅವರ ಮತದಾನದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಸೋಮಶೇಖರಗೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ : ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರ ಮತ ಚಲಾಯಿಸಿರುವುದು ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ಮತದಾನದ ಬಳಿಕ ವಿಧಾನಸೌಧದಲ್ಲಿ ಮಾತನಾಡಿ ಚುನಾವಣೆಯ ಮುನ್ನ ಯಾವುದೇ ಪಕ್ಷದ ನಾಯಕರು ಸಂಪರ್ಕಿಸಿರಲಿಲ್ಲ. ಆದರೆ ಮತದಾನದ ಹಿಂದಿನ ದಿನ ಮುಖ್ಯಮಂತ್ರಿ ಸ್ವತಃ ಸಂಪರ್ಕಿಸಿ ರೆಸಾರ್ಟ್‌ಗೆ ಕರೆಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತ ನೀಡಿದ್ದೇನೆ ಎಂದು ಸೋಮಶೇಖರ್ ಎಂದಿದ್ದಾರೆ.

ಇದನ್ನೂ ಓದಿ: NEP ವಿರುದ್ಧ ಗುಡುಗು: ತ್ರಿಭಾಷಾ ನೀತಿ ಒಪ್ಪಲ್ಲ ಎಂದ ರಾಜ್ಯಪಾಲ

ಹೆಬ್ಬಾರ್ ಕೂಡ ಕಾಂಗ್ರೆಸ್ ಪರ? : ರಾಜಕೀಯ ಮೂಲಗಳ ಪ್ರಕಾರ, ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಪರವೇ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಇದು ನಿಜವಾದರೆ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚುವರಿ ಬಲ ಸಿಗಲಿದ್ದು, ಏಳನೇ ಸ್ಥಾನಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ನಿರ್ಣಾಯಕವಾಗಬಹುದು.

ಜಿಟಿಡಿ ಮತದ ಸುತ್ತ ಹೆಚ್ಚಿದ ಕುತೂಹಲ : ಇದೀಗ ಎಲ್ಲರ ಗಮನ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರತ್ತ ತಿರುಗಿದೆ. ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ, “ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ” ಎಂದು ಹೇಳಿದ್ದಾರೆ. ಆದರೆ ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಹೇಳಿಕೆಯೇ ಈಗ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ

ಗೋವಿಂದರಾಜು ವ್ಯಕ್ತಪಡಿಸಿದ್ದ ವಿಶ್ವಾಸ : ಇದರ ನಡುವೆ ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು, ಜಿಟಿಡಿ ತಮ್ಮ ಪರವೇ ಮತ ಹಾಕಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. “ತಾಯಿ ಚಾಮುಂಡೇಶ್ವರಿ ಜಿಟಿಡಿಯವರನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರ ಮೊದಲ ಪ್ರಾಶಸ್ತ್ಯದ ಮತ ನಮಗೇ ಸಿಕ್ಕಿದೆ ಎಂಬ ಸಂಪೂರ್ಣ ನಂಬಿಕೆ ಇದೆ” ಎಂದು ಗೋವಿಂದರಾಜು ಹೇಳಿದ್ದರು. ಆದರೆ ಜಿಟಿಡಿ ನೇರವಾಗಿ ಅದನ್ನು ದೃಢಪಡಿಸದಿರುವುದು ಕುತೂಹಲ ಹೆಚ್ಚಿಸಿದೆ.

ಮೈತ್ರಿಕೂಟಕ್ಕೆ ಸಂಕಷ್ಟ? : ಒಂದೆಡೆ ಸೋಮಶೇಖರ್ ಹಾಗೂ ಹೆಬ್ಬಾರ್ ಕಾಂಗ್ರೆಸ್ ಪರ ಮತ ಚಲಾಯಿಸಿರಬಹುದು ಎನ್ನಲಾಗಿದ್ದರೆ, ಮತ್ತೊಂದೆಡೆ ಜಿಟಿಡಿ ಮತದ ಬಗ್ಗೆ ಉದ್ಭವಿಸಿರುವ ಅನುಮಾನಗಳು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಏಳನೇ ಸ್ಥಾನಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಒಂದೇ ಒಂದು ಮತವೂ ನಿರ್ಣಾಯಕವಾಗುವ ಪರಿಸ್ಥಿತಿ ಇರುವುದರಿಂದ, ಪ್ರತಿಯೊಂದು ಮತವೂ ರಾಜಕೀಯ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: 7ನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡುವೆ 77 ಶಾಸಕರು ಮತ ಚಲಾವಣೆ

ಫಲಿತಾಂಶದ ಬಳಿಕ ಸ್ಪಷ್ಟ ಚಿತ್ರಣ : ಜಿಟಿಡಿ ಅಡ್ಡಮತದಾನ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಅಧಿಕೃತ ಉತ್ತರ ಇಲ್ಲ. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳಿಗೆ ಸಿಗುವ ಮತಗಳ ಲೆಕ್ಕಾಚಾರದಿಂದ ಕೆಲವು ರಾಜಕೀಯ ನಿರ್ಣಯಗಳು ಹೊರಬೀಳುವ ಸಾಧ್ಯತೆ ಇದೆ. ಸದ್ಯಕ್ಕೆ ಜಿಟಿಡಿ ಅವರ “ಆತ್ಮಸಾಕ್ಷಿಯ ಮತ” ಹೇಳಿಕೆಯೇ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದು, ಜೆಡಿಎಸ್ ನಾಯಕತ್ವ ಮುಂದಿನ ದಿನಗಳಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.