SK Home Ad
Home ಕೃಷಿ/ವಾಣಿಜ್ಯ ಗ್ರಾಹಕರಿಗೆ ಮತ್ತೊಂದು ಶಾಕ್; ಹೋಟೆಲ್ ಊಟ, ತಿಂಡಿ ಬೆಲೆ ಏರಿಕೆ! ₹4,000 ಆಗುತ್ತಾ ಸಿಲಿಂಡರ್ ದರ?

ಗ್ರಾಹಕರಿಗೆ ಮತ್ತೊಂದು ಶಾಕ್; ಹೋಟೆಲ್ ಊಟ, ತಿಂಡಿ ಬೆಲೆ ಏರಿಕೆ! ₹4,000 ಆಗುತ್ತಾ ಸಿಲಿಂಡರ್ ದರ?

0
102

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಡಿ, ಈಗ ನೇರವಾಗಿ ನಿಮ್ಮ ಅಡುಗೆ ಮನೆ ಮತ್ತು ಜೇಬಿಗೆ ಬಿಸಿ ಮುಟ್ಟಿಸುತ್ತಿದೆ. ಇನ್ನು ಮುಂದೆ ನೀವು ಊಟ, ತಿಂಡಿಗೆಂದು ಹೋಟೆಲ್‌ಗೆ ಹೋಗುವ ಮುನ್ನ ಒಮ್ಮೆ ಜೇಬನ್ನು ನೋಡಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಈಗಾಗಲೇ ಹೋಟೆಲ್ ತಿನಿಸುಗಳ ದರ ಹೆಚ್ಚಳದಿಂದ ಕಂಗೆಟ್ಟಿರುವ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬರೆ ಎಳೆಯಲು ಹೋಟೆಲ್ ಮಾಲೀಕರು ಭರದ ಸಿದ್ಧತೆ ನಡೆಸುತ್ತಿದ್ದಾರೆ.

ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಜಲ ಮಾರ್ಗದ ಮೇಲೆ ಇರಾನ್ ನಿಯಂತ್ರಣ ಹೇರಿರುವುದರಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಸರಕು ಸಾಗಾಟಕ್ಕೆ ಭಾರಿ ಅಡ್ಡಿಯಾಗಿದೆ. ಇದರ ನೇರ ಪರಿಣಾಮ ಎಂಬಂತೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದ್ದು, ದೇಶದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಕೇವಲ ಮೂರೇ ತಿಂಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ದರ ಬರೋಬ್ಬರಿ 1,240 ರೂಪಾಯಿಗಳಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 991 ರೂಪಾಯಿ ಹೆಚ್ಚಳವಾಗಿದ್ದ ವಾಣಿಜ್ಯ ಸಿಲಿಂಡರ್ ದರ, ಜೂನ್ 1 ರಂದು ಮತ್ತೆ 46 ರೂಪಾಯಿ ಏರಿಕೆಯಾಗಿದೆ. ಸದ್ಯ 3,198 ರೂಪಾಯಿ ಇರುವ ಸಿಲಿಂಡರ್ ದರ ಮುಂದಿನ ದಿನಗಳಲ್ಲಿ 4,000 ರೂಪಾಯಿ ತಲುಪುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೆ, ಇನ್ನು ಕೆಲವು ದಿನಗಳಲ್ಲೇ ಮತ್ತೆ 800 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ವಾಣಿಜ್ಯ ಸಿಲಿಂಡರ್‌ನ ಈ ನಿರಂತರ ಬೆಲೆ ಏರಿಕೆಯ ಬಿಸಿ ಈಗಾಗಲೇ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ತಟ್ಟಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಹಲವು ಭಾಗಗಳಲ್ಲಿ ಹೋಟೆಲ್ ಊಟ, ತಿಂಡಿ, ಕಾಫಿ, ಟೀ ದರಗಳನ್ನು 5 ರೂಪಾಯಿಯಿಂದ 20 ರೂಪಾಯಿಗಳವರೆಗೆ ಹೆಚ್ಚಿಸಲಾಗಿತ್ತು. ಆದರೆ ಈಗ ಗ್ಯಾಸ್ ಬೆಲೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಮತ್ತೊಮ್ಮೆ ದರ ಹೆಚ್ಚಳ ಮಾಡಲು ಮುಂದಾಗಿದ್ದಾರೆ.

ಈ ಹೊಸ ದರ ಏರಿಕೆಯ ಪ್ರಸ್ತಾಪದ ಪ್ರಕಾರ, ನಿಮ್ಮ ನೆಚ್ಚಿನ ಇಡ್ಲಿ, ವಡೆ, ದೋಸೆ ಹಾಗೂ ರೈಸ್ ಐಟಂಗಳ ಮೇಲೆ ಮತ್ತೆ 5 ರೂಪಾಯಿಯಿಂದ 20 ರೂಪಾಯಿ ಹಾಗೂ ನಿತ್ಯದ ಕಾಫಿ ಮತ್ತು ಚಹಾ ಬೆಲೆಯ ಮೇಲೆ 2 ರೂಪಾಯಿಯಿಂದ 3 ರೂಪಾಯಿ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ಸಿದ್ಧತೆ ನಡೆಸುತ್ತಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಊಟ-ತಿಂಡಿಗಾಗಿ ಹೋಟೆಲ್‌ಗಳನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಜನಸಾಮಾನ್ಯರಿಗೆ ಇದು ಮತ್ತೊಂದು ದೊಡ್ಡ ಶಾಕ್ ನೀಡಲಿದೆ.

ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಬಿಸಿ ಕೇವಲ ಇಂಧನಕ್ಕಷ್ಟೇ ಸೀಮಿತವಾಗದೆ, ಜನಸಾಮಾನ್ಯರ ದಿನನಿತ್ಯದ ತಟ್ಟೆಯವರೆಗೂ ಬಂದು ತಲುಪಿದೆ. ಇನ್ನು ಮುಂದಿನ ದಿನಗಳಲ್ಲಿ ಹೋಟೆಲ್ ಊಟ ಮತ್ತಷ್ಟು ದುಬಾರಿಯಾಗುವುದು ಮಾತ್ರ ಗ್ಯಾರಂಟಿ.