ಬೆಂಗಳೂರು: ನೀಟ್-ಯುಜಿ ಪರೀಕ್ಷೆ ನಡೆದ ದಿನವೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ವಾಗ್ವಾದಕ್ಕೆ ಕಾರಣವಾಗಿದೆ.
ಇದೇ ದಿನ ದೇಶಾದ್ಯಂತ ನೀಟ್ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಬೃಹತ್ ಕಾರ್ಯಕ್ರಮದಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾರ್ಯಕ್ರಮವನ್ನು ಮತ್ತೊಂದು ದಿನಕ್ಕೆ ಮುಂದೂಡಬಹುದಾಗಿತ್ತು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗದಂತೆ ಸರ್ಕಾರ ಸ್ಪಷ್ಟ ನಿಯಮ ರೂಪಿಸಬೇಕು ಹಾಗೂ ವಿಐಪಿ ಸಂಸ್ಕೃತಿಯಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮೊದಲು ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: CBSE 12ನೇ ತರಗತಿ ಮರುಮೌಲ್ಯಮಾಪನ ಫಲಿತಾಂಶ ಬಿಡುಗಡೆ
ಸಂಚಾರಿ ಸಹಾಯವಾಣಿ ಇದೆ : ಬೆಂಗಳೂರಿನಲ್ಲಿ ಒಟ್ಟು ಮೂರು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಗೈರಾಗಿದ್ದು, ಅವರಲ್ಲಿ ಒಬ್ಬರು ಹಳೆಯ ಹಾಲ್ ಟಿಕೆಟ್ ತಂದಿದ್ದರೆ, ಉಳಿದವರು ತಡವಾಗಿ ಆಗಮಿಸಿದ್ದರು ಎಂದು ಅವರು ಸ್ಪಷ್ಟಪಡಿಸಿದರು. ಕರ್ನಾಟಕ ಸರ್ಕಾರ ಮುಂಚಿತವಾಗಿಯೇ ಟ್ರಾಫಿಕ್ ಸಲಹೆ ಮತ್ತು ಸಹಾಯವಾಣಿ ವ್ಯವಸ್ಥೆ ಕಲ್ಪಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಪರೀಕ್ಷೆ ಬರೆದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ದುರದೃಷ್ಟಕರ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.






















