ಇಂಡೋನೇಷ್ಯಾ : ಜಕಾರ್ತಾ ಹೊರವಲಯದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 81ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬೆಕಾಸಿ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲೇ ನಿಂತಿದೆ. ಇದೇ ವೇಳೆ ಎದುರಿನಿಂದ ಬಂದ ಮತ್ತೊಂದು ರೈಲು ಆ ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ರೈಲಿನ ಬೋಗಿಗಳು ಭಾರೀ ಹಾನಿಗೊಳಗಾಗಿದ್ದು, ವಿಶೇಷವಾಗಿ ಮಹಿಳಾ ಬೋಗಿ ಸಂಪೂರ್ಣ ಜಖಂಗೊಂಡಿದೆ.
ಅಪಘಾತದ ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 81ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಪ್ರಯಾಣಿಕರು ಬೋಗಿಗಳೊಳಗೆ ಸಿಲುಕಿರುವ ಮಾಹಿತಿ ಲಭ್ಯವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಅಪಘಾತದ ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಬೋಗಿಗಳಲ್ಲಿದ್ದವರನ್ನು ಹೊರತೆಗೆದುತ್ತಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸುತ್ತಿವೆ. ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆದಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ.
ಈ ಘಟನೆಯ ತನಿಖೆಯನ್ನು ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ KNKT ಕೈಗೆತ್ತಿಕೊಂಡಿದೆ. ಲೆವೆಲ್ ಕ್ರಾಸಿಂಗ್ ಸುರಕ್ಷತಾ ವ್ಯವಸ್ಥೆಯ ವೈಫಲ್ಯ, ಮಾನವೀಯ ತಪ್ಪು ಅಥವಾ ತಾಂತ್ರಿಕ ದೋಷಗಳ ಕುರಿತು ಪರಿಶೀಲನೆ ನಡೆಯುತ್ತಿದೆ.
ಇತ್ತೀಚಿನ ಅಪ್‌ಡೇಟ್ ಪ್ರಕಾರ, ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅಪಘಾತದ ಸ್ಥಳದಲ್ಲಿ ಹಾನಿಗೊಳಗಾದ ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.























