Home Advertisement
Home ಸುದ್ದಿ ದೇಶ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ: TVK ರಾಜಕೀಯಕ್ಕೆ ಚಾಲನೆ

ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ: TVK ರಾಜಕೀಯಕ್ಕೆ ಚಾಲನೆ

0
82

ವಿಜಯ್ ಸರ್ಕಾರ? ಕಾಂಗ್ರೆಸ್, PMK ಬೆಂಬಲ ನಿರ್ಣಾಯಕ: ಮೈತ್ರಿ ರಾಜಕೀಯಕ್ಕೆ ಚಾಲನೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ದೊಡ್ಡ ತಿರುವು ತಂದಿದೆ. ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 234 ಸ್ಥಾನಗಳ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಿರುವ 118 ಸ್ಥಾನಗಳ ಮ್ಯಾಜಿಕ್ ಸಂಖ್ಯೆಗೆ ಇನ್ನೂ 10 ಸ್ಥಾನಗಳ ಕೊರತೆಯಿದೆ.

ಈ ಹಿನ್ನೆಲೆಯಲ್ಲಿ, TVK ಪಕ್ಷವು ಸರ್ಕಾರ ರಚನೆಗೆ ತನ್ನ ಹಕ್ಕನ್ನು ಮಂಡಿಸಲು ಸಣ್ಣ ಪಕ್ಷಗಳ ಬೆಂಬಲ ಪಡೆಯಲು ಮುಂದಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಪದಾಧಿಕಾರಿಗಳು ಈಗಾಗಲೇ ರಾಜಭವನಕ್ಕೆ ಭೇಟಿ ನೀಡಿ ಸರ್ಕಾರ ರಚನೆಗೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ 2 ವಾರಗಳಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿರುವುದು ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ತಂದಿದೆ.

ಮೈತ್ರಿ ರಾಜಕೀಯದ ಸುಳಿವು : ಚುನಾವಣಾ ಫಲಿತಾಂಶದ ನಂತರ ಮೈತ್ರಿ ರಾಜಕೀಯದ ಚರ್ಚೆಗಳು ಜೋರಾಗಿವೆ. ರಾಹುಲ್ ಗಾಂಧಿ ಅವರು ವಿಜಯ್ ಅವರಿಗೆ ಕರೆ ಮಾಡಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ಇದು ಕಾಂಗ್ರೆಸ್ ಮತ್ತು TVK ನಡುವಿನ ಸಾಧ್ಯ ಮೈತ್ರಿಗೆ ಮುನ್ನುಡಿ ಬರೆದಿದೆ ಎನ್ನಲಾಗುತ್ತಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ಬೆಂಬಲ ನೀಡುವ ಬಗ್ಗೆ ಒಳಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ಪಾಟಾಳಿ ಮಕ್ಖಲ್ ಕಚ್ಚಿ (PMK) 4 ಸ್ಥಾನಗಳನ್ನು ಗೆದ್ದಿದ್ದು, ಇವರ ಬೆಂಬಲವೂ ನಿರ್ಣಾಯಕವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಸಮೀಕರಣಗಳ ಲೆಕ್ಕಾಚಾರ : TVKಗೆ ಅಗತ್ಯವಿರುವ 10 ಸ್ಥಾನಗಳ ಕೊರತೆಯನ್ನು ಪೂರೈಸಲು ಕಾಂಗ್ರೆಸ್ ಮತ್ತು PMK ಸೇರಿದಂತೆ ಇತರ ಸಣ್ಣ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿದೆ. ಈ ಬೆಂಬಲ ಸಿಕ್ಕರೆ ವಿಜಯ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆ ಸಾಧ್ಯವಾಗಲಿದೆ.

ರಾಜಕೀಯ ವಲಯದಲ್ಲಿ ಈಗ “ವಿಜಯ್ ಎಫೆಕ್ಟ್” ಮತ್ತು “ಹೊಸ ರಾಜಕೀಯ” ಎಂಬ ಚರ್ಚೆಗಳು ಗರಿಗೆದರಿದ್ದು, ದ್ರಾವಿಡ ರಾಜಕೀಯದ ದೀರ್ಘಕಾಲದ ಪರಂಪರೆಯಲ್ಲಿ ಮಹತ್ವದ ಬದಲಾವಣೆಗೆ ಇದು ಸೂಚಕವೆಂದು ಹೇಳಲಾಗುತ್ತಿದೆ.

ರಾಜ್ಯಪಾಲರ ನಿರ್ಧಾರ, ಮೈತ್ರಿ ಮಾತುಕತೆಗಳ ಫಲಿತಾಂಶ ಮತ್ತು ಪಕ್ಷಗಳ ಅಂತಿಮ ನಿಲುವುಗಳ ಮೇಲೆ ಮುಂದಿನ ಸರ್ಕಾರದ ರೂಪುರೇಷೆ ನಿರ್ಧಾರವಾಗಲಿದೆ. ಇತ್ತ ರಾಜ್ಯದ ಜನರು ಹೊಸ ಸರ್ಕಾರ ಯಾವ ರೂಪದಲ್ಲಿ ಬರಲಿದೆ ಎಂಬ ಕುತೂಹಲದಿಂದ ಕಾದಿದ್ದಾರೆ.