ಪ್ರತಿಷ್ಠಿತ ಐಟಿ ಸಂಸ್ಥೆಯಾದ ಟಿಎಸ್‌ಇ (TCS) ನ ಮಹಾರಾಷ್ಟ್ರದ ನಾಶಿಕ್ ಶಾಖೆಯಲ್ಲಿ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳ ಅಷ್ಟೇ ಅಲ್ಲದೆ, ಈಗ ಪುರುಷ ಉದ್ಯೋಗಿಯೊಬ್ಬರು ತಮಗೆ ನೀಡಲಾದ ಭೀಕರ ಮಾನಸಿಕ ಹಿಂಸೆ ಮತ್ತು ಬಲವಂತದ ಮತಾಂತರದ ಪ್ರಯತ್ನಗಳ ಬಗ್ಗೆ ಬಾಯಿಬಿಟ್ಟಿದ್ದಾರೆ.
ದೂರುದಾರ ಉದ್ಯೋಗಿ ತನ್ನ ಅಳಲನ್ನು ತೋಡಿಕೊಳ್ಳುತ್ತಾ, ತನ್ನ ಟೀಮ್ ಲೀಡರ್ ತೌಸಿಫ್ ಅಖ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ಸೇರಿ 2022 ರಿಂದಲೂ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಒಬ್ಬ ನಿಷ್ಠಾವಂತ ಹಿಂದೂ ಮತ್ತು ರಾಮದಾಸ್ ಸ್ವಾಮಿಗಳ ಅನುಯಾಯಿಯಾಗಿದ್ದ ಈ ಉದ್ಯೋಗಿಗೆ, ತನ್ನ ಧಾರ್ಮಿಕ ಗುರುತುಗಳಾದ ರುದ್ರಾಕ್ಷಿ ಮಾಲೆಯನ್ನು ತೆಗೆಯುವಂತೆ ಒತ್ತಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿ, ಆತನ ನಂಬಿಕೆಯನ್ನು ಹೀಯಾಳಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಕಿರುಕುಳವು ಕೇವಲ ಮಾತಿಗೆ ಸೀಮಿತವಾಗದೆ, ದೈಹಿಕ ಮತ್ತು ಮಾನಸಿಕ ಹಂತಕ್ಕೆ ತಲುಪಿತ್ತು. 2023ರ ಈದ್ ಹಬ್ಬದ ಸಮಯದಲ್ಲಿ, ತೌಸಿಫ್ ಈ ಉದ್ಯೋಗಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದು, ಆತನಿಗೆ ತಲೆಗೆ ಟೋಪಿ ಧರಿಸುವಂತೆ ಮಾಡಿ, ನಮಾಜ್ ಮಾಡುವಂತೆ ಒತ್ತಾಯಿಸಿದ್ದನು. ಈ ದೃಶ್ಯಗಳನ್ನು ಫೋಟೋ ತೆಗೆದು ಆಫೀಸ್‌ನ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿಕೊಂಡು ಆತನನ್ನು ಅವಮಾನಿಸಲಾಗಿತ್ತು. ಇದರ ಜೊತೆಗೆ ಆತ ಶುದ್ಧ ಸಸ್ಯಾಹಾರಿಯಾಗಿದ್ದರೂ, ನೈಟ್ ಶಿಫ್ಟ್ ಮುಗಿದ ನಂತರ ಹೋಟೆಲ್‌ಗಳಿಗೆ ಕರೆದೊಯ್ದು ಬಲವಂತವಾಗಿ ಮಾಂಸಾಹಾರ ಸೇವಿಸುವಂತೆ ಪೀಡಿಸಲಾಗುತ್ತಿತ್ತು.
ಎಲ್ಲಕ್ಕಿಂತ ಅತಿರೇಕದ ಸಂಗತಿಯೆಂದರೆ, ಆ ಉದ್ಯೋಗಿಯ ವೈಯಕ್ತಿಕ ಜೀವನದ ಬಗ್ಗೆ ಆರೋಪಿಗಳು ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ. ದೂರುದಾರ ದಂಪತಿಗೆ ಮದುವೆಯಾಗಿ ವರ್ಷಗಳಾದರೂ ಮಕ್ಕಳಿಲ್ಲದ ವಿಷಯವನ್ನು ಹೀಯಾಳಿಸಿ, “ಮಕ್ಕಳಾಗಬೇಕಿದ್ದರೆ ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳುಹಿಸು” ಎಂಬ ಅತ್ಯಂತ ಕೆಳಮಟ್ಟದ ಹೇಳಿಕೆಗಳನ್ನು ನೀಡಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಆತನ ತಂದೆಗೆ ಪಾರ್ಶ್ವವಾಯು ಪೀಡಿತರಾದಾಗಲೂ, “ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ನಿನ್ನ ತಂದೆ ಗುಣಮುಖರಾಗುತ್ತಾರೆ” ಎಂದು ಹೇಳುವ ಮೂಲಕ ಆತನ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದರು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಮಹಿಳಾ ಉದ್ಯೋಗಿಗಳು ನೀಡಿದ ಲೈಂಗಿಕ ಕಿರುಕುಳದ ದೂರಿನ ಬೆನ್ನಲ್ಲೇ ಈ ಪುರುಷ ಉದ್ಯೋಗಿಯ ಹೇಳಿಕೆ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸದ್ಯ ನಾಶಿಕ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರತಿಷ್ಠಿತ ಕಂಪನಿಯೊಂದರ ಒಳಗೆ ಇಂತಹ ಧಾರ್ಮಿಕ ಕಿರುಕುಳದ ಜಾಲ ಹೇಗೆ ಕೆಲಸ ಮಾಡುತ್ತಿತ್ತು ಎಂಬುದು ತನಿಖೆಯಿಂದ ಹೊರಬರಬೇಕಿದೆ.




















